ADVERTISEMENT

ಫ್ರಾನ್ಸ್‌ನಿಂದ ಮರಳಿದ ದಾವಣಗೆರೆಯ ವೈದ್ಯನಿಗೆ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 12:24 IST
Last Updated 27 ಮಾರ್ಚ್ 2020, 12:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಫ್ರಾನ್ಸ್ ದೇಶದಿಂದ ನಗರಕ್ಕೆ ವಾಪಸ್ಸಾಗಿದ್ದ 24 ವರ್ಷದ ವೈದ್ಯನಲ್ಲಿ ಕೊರೊನಾ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ ದೃಡಪಟ್ಟಿದೆ. ಇದು ಜಿಲ್ಲೆಯಲ್ಲಿನ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವ ಮೊದಲ ಪ್ರಕರಣವಾಗಿದ್ದು, ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಫ್ರಾನ್ಸ್‌ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ವೈದ್ಯ, ಮಾರ್ಚ್ 17ರಂದು ಬೆಳಿಗ್ಗೆ 11.30ಕ್ಕೆ ಪ್ಯಾರಿಸ್‌ನಿಂದ ಅಬುದಾಬಿ ಮೂಲಕ ಹೊರಟು 18ರಂದು ಬೆಂಗಳೂರಿಗೆ ಬಂದಿದ್ದರು. ಅಲ್ಲಿಂದ ವೋಲ್ವೊ ಬಸ್‌ನಲ್ಲಿ ಮೆಜೆಸ್ಟಿಕ್‌ನ ಕೆ.ಎಸ್.ಆರ್‌.ಟಿ.ಸಿ. ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಬಳಿಕ ಬೆಳಿಗ್ಗೆ 10 ಗಂಟೆಗೆ ರಾಜಹಂಸ ಬಸ್‌ನಲ್ಲಿ ಹೊರಟು ಮಧ್ಯಾಹ್ನ 4ಕ್ಕೆ ದಾವಣಗೆರೆ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿಂದ ತಂದೆಯ ಕಾರಿನಲ್ಲಿ ಮನೆಗೆ ತೆರಳಿದ್ದರು ಎಂದು ತಿಳಿಸಿದರು.

ಸೋಂಕಿತ ವೈದ್ಯನ ಜೊತೆಗೆ ನೇರವಾಗಿ 18 ಜನ ಸಂಪರ್ಕ ಹೊಂದಿದ್ದರು. ಆತನ ತಂದೆ, ತಾಯಿ, ತಂಗಿ ಹಾಗೂ ಆಸಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಅಟೆಂಡರ್‌ ಸೇರಿ 18 ಜನರನ್ನು ಪ್ರೊಟೊಕಾಲ್ ಪ್ರಕಾರ 14 ದಿನಗಳ ಕಾಲ ಹೋಂ ಕಾರಂಟೈನ್‌ನಲ್ಲಿ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಹೋಂ ಕ್ವಾರಂಟೈನ್‌ನಲ್ಲಿದ್ದ ಸೋಂಕಿತ ವ್ಯಕ್ತಿಯಲ್ಲಿ ಮಾರ್ಚ್ 25ರಂದು ಜ್ವರ, ಗಂಟಲು ನೋವು, ಕೆಮ್ಮು ಕಾಣಿಸಿಕೊಂಡಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಗಂಟಲಿನ ದ್ರಾವಣದ ಮಾದರಿಯನ್ನು ಅಂದೇ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು‌. ಮಾರ್ಚ್ 26 ರಂದು ಸಂಜೆ ಬಂದ ವರದಿಯಲ್ಲಿ ಆತನಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

ಪುಣೆಯ ಪ್ರಯೋಗಾಲಯದಿಂದ ಶುಕ್ರವಾರ ಮಧ್ಯಾಹ್ನ ಬಂದ ಅಂತಮ ವರದಿಯೂ ಪಾಸಿಟಿವ್‌ ಬಂದಿದೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಉತ್ತಮವಾಗಿ ಸ್ಪಂದಿಸುತ್ತಿದ್ದಾನೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.