ಉಡುಪಿ: ಕೋವಿಡ್ ಸೋಂಕು ಹರಡುವಿಕೆ ತಡೆಗೆ ಇಡೀ ರಾಜ್ಯವನ್ನು ಲಾಕ್‌ಡೌನ್ ಮಾಡಲಾಗಿದ್ದು, ಜಿಲ್ಲೆಯೂ ಸ್ತಬ್ಧವಾಗಿದೆ. ಪರಿಣಾಮ ಕೂಲಿ ಕಾರ್ಮಿಕರು, ನಿರ್ಗತಿಕರು, ನಿರಾಶ್ರಿತರು ಬೀದಿಗೆ ಬಿದ್ದಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್‌ಸ್ಟಾಂಡ್, ಸರ್ವೀಸ್ ಹಾಗೂ ನಗರ ಸಾರಿಗೆ ನಿಲ್ದಾಣ, ಕೃಷ್ಣಮಠ, ಚಿತ್ತರಂಜನ್ ಸರ್ಕಲ್, ಅಜ್ಜರಕಾಡು ಉದ್ಯಾನ ಹೀಗೆ ನಗರದ ಹಲವು ಕಡೆಗಳಲ್ಲಿ ನಿರಾಶ್ರಿತರು ಊಟವಿಲ್ಲದೆ ಪರಿತಪಿಸುತ್ತಿದ್ದಾರೆ. ಇವರಲ್ಲಿ ಬಹುತೇಕರು ವೃದ್ಧರಾಗಿದ್ದು, ನಿತ್ಯ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರು.
ನಗರ ಸಂಪೂರ್ಣ ಬಂದ್ ಆಗಿರುವುದರಿಂದ ನಿರ್ಗತಿಕರಿಗೆ ಭಿಕ್ಷೆಯೂ ಸಿಗುತ್ತಿಲ್ಲ. ಹೋಟೆಲ್‌ಗಳು ಬಂದ್ ಆಗಿರುವುದರಿಂದ ಊಟವೂ ದೊರೆಯುತ್ತಿಲ್ಲ. ಹಾಗಾಗಿ, ಊಟಕ್ಕಾಗಿ ಎಲ್ಲೆಂದರಲ್ಲಿ ಅಲೆಯುತ್ತಿರುವ ದೃಶ್ಯ ಕಂಡು ಬರುತ್ತಿದೆ.
ನಿರ್ಗತಿಕರಿಗೆ ಊಟದ ವ್ಯವಸ್ಥೆ
ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಆಶ್ರಯ ಚಾರಿಟೆಬಲ್ ಟ್ರಸ್ಟ್‌ನಿಂದ ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕೂಲಿ ಕಾರ್ಮಿಕರು, ಬಸ್ ನಿಲ್ದಾಣ, ರಸ್ತೆಬದಿಯ ಜೋಪಡಿಯಲ್ಲಿ ವಾಸವಾಗಿರುವ 600 ಜನರಿಗೆ ಟ್ರಸ್ಟ್‌ನಿಂದ ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು.ಶಾಸಕ ರಘುಪತಿ ಭಟ್ ಮಣಿಪಾಲ ಸೇರಿದಂತೆ ಹಲವೆಡೆ ಆಹಾರದ ಪೊಟ್ಟಣಗಳನ್ನು ವಿತರಿಸಿದರು.
21 ದಿನ ನಿರಂತರವಾಗಿ ಆಹಾರ ಪೂರೈಸುವುದಾಗಿ ಸಮಿತಿ ಹಾಗೂ ಟ್ಟಸ್ಟ್ ತಿಳಿಸಿದ್ದು, ಪ್ರತಿದಿನ ಮಧ್ಯಾಹ್ನ 12 ರಿಂದ ಕೃಷ್ಣಮಠದ ರಾಜಾಂಗಣ ಪಾರ್ಕಿಂಗ್, ಕಲ್ಸಂಕ ಸರ್ಕಲ್, ಸಿಟಿ, ಸರ್ವೀಸ್ ಬಸ್ ನಿಲ್ದಾಣ, ಕರಾವಳಿ ಜಂಕ್ಷನ್, ಸಂತೆಕಟ್ಟೆ, ಶಾರದಾ ಕಲ್ಯಾಣ ಮಂಟಪ, ಮಣಿಪಾಲ್ ಆಸ್ಪತ್ರೆ, ಸರಳೆಬೆಟ್ಟು, ಪರ್ಕಳ, ಬೀಡಿನಗುಡ್ಡೆ, ಮಿಷನ್ ಆಸ್ಪತ್ರೆ, ಭುಜಂಗ ಪಾರ್ಕ್, ಬ್ರಹ್ಮಗಿರಿ ಜಂಕ್ಷನ್, ಅಂಬಲಪಾಡಿ ಜಂಕ್ಷನ್‌ಗಳಲ್ಲಿ ಆಹಾರ ವಿತರಣೆ ನಡೆಯಲಿದೆ ಎಂದು ಟ್ರಸ್ಟ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.