ADVERTISEMENT

ಸರ್ಕಾರದ ವಿರುದ್ಧ ಹೇಳಿಕೆ ನೀಡಿದ ಆರೋಪ: 6 ಮಂದಿ ಕೊರೊನಾ ವಾರಿಯರ್ಸ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 12 ಮೇ 2020, 20:00 IST
Last Updated 12 ಮೇ 2020, 20:00 IST
ಕೊರೊನಾ ವಾರಿಯರ್‌ಗಳಾದ ಆರೋಗ್ಯ ಸಿಬ್ಬಂದಿಯ ಸಂಗ್ರಹ ಚಿತ್ರ
ಕೊರೊನಾ ವಾರಿಯರ್‌ಗಳಾದ ಆರೋಗ್ಯ ಸಿಬ್ಬಂದಿಯ ಸಂಗ್ರಹ ಚಿತ್ರ    

ಶಿವಮೊಗ್ಗ: ಕೋವಿಡ್‌ ರೋಗಿಗಳ ಆರೈಕೆಯಲ್ಲಿ ತೊಡಗಿರುವ ಮೆಗ್ಗಾನ್ ಕೇಂದ್ರದ ಆರು ಮಂದಿ ಸಿಬ್ಬಂದಿಯನ್ನು ಸರ್ಕಾರದ ವಿರುದ್ಧ ಹೇಳಿಕೆ ನೀಡಿದ ಕಾರಣಕ್ಕಾಗಿ ಅಮಾನತು ಮಾಡಲಾಗಿದೆ.

ಶುಶ್ರೂಷಕಿಯರಾದ ಚೇತನ ಕುಮಾರಿ, ಪವಿತ್ರಾ, ಭಾವನಾ, ಶುಶ್ರೂಷಕ ರವಿ, ಡಿ ಗ್ರೂಪ್‌ ನೌಕರರಾದ ಪದ್ಮರಾಜ್, ಅರುಣ ಅಮಾನತು ಗೊಂಡವರು.

ಕೋವಿಡ್‌ ರೋಗಿಗಳ ಆರೈಕೆಯಲ್ಲಿ ಇರುವ ಸಿಬ್ಬಂದಿ ಮನೆಗೆ ತೆರಳದೇ ಅಲ್ಲೇ ವಾಸ್ತವ್ಯ ಮಾಡಬೇಕಿದೆ. ಮೊದಲ 7 ದಿನಗಳು ರೋಗಿಗಳ ಆರೈಕೆಗೆ ನಿಯೋಜಿತವಾಗಿರುವ ತಂಡಕ್ಕೆ ಮೆಗ್ಗಾನ್ ಆಸ್ಪ‍ತ್ರೆಯ ಆವರಣದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಉಳಿಯಲು ಸೂಚಿಸಲಾಗಿತ್ತು. ಅಲ್ಲಿ ನೀರಿನ ವ್ಯವಸ್ಥೆ ಇಲ್ಲದ ಕಾರಣ ಕುವೆಂಪು ರಸ್ತೆಯ ಖಾಸಗಿ ವಸತಿಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲೂ ಊಟ, ವಸತಿ ಸೌಕರ್ಯಗಳು ಇಲ್ಲವೆಂದು ಆಕ್ಷೇಪಿಸಿದ್ದರು. ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ADVERTISEMENT

ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಿದ ಕಾರಣ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಗುರುಪಾದಪ್ಪ ಅಮಾನತು ಮಾಡಿದ್ದಾರೆ.

ಸಂಘದ ವಿರೋಧ: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಆರೋಗ್ಯ ನೌಕರರ ಸಂಘದ ಅಧ್ಯಕ್ಷ ಮಾ.ಸ.ನಂಜುಂಡ ಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಿ, ಅಮಾನತು ಆದೇಶ ಹಿಂಪಡೆಯದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.