ADVERTISEMENT

ಕೊರೊನಾ ಪ್ರಸರಣ: ಭೀತಿಗಿಲ್ಲ ಕಾರಣ

ಶೇ 30ರಷ್ಟು ಸೋಂಕು ಪ್ರಕರಣಗಳಿಗೆ ತಬ್ಲೀಗ್‌ ಸಭೆಯ ನಂಟು l ಅಂಟುರೋಗದ ಸರಪಣಿ ತುಂಡರಿಸಲು 22 ಸಾವಿರ ಮಂದಿ ಕ್ವಾರಂಟೈನ್‌

ಪಿಟಿಐ
Published 5 ಏಪ್ರಿಲ್ 2020, 1:22 IST
Last Updated 5 ಏಪ್ರಿಲ್ 2020, 1:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌–19 ರೋಗಕ್ಕೆ ಬಲಿಯಾದವರ ಸಂಖ್ಯೆ ಶನಿವಾರದ ಹೊತ್ತಿಗೆ ನೂರನ್ನು ಸಮೀಪಿಸಿದೆ. ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳು 3,668ಕ್ಕೆ ಏರಿವೆ.ಹಾಗಿದ್ದರೂ, ಜನರು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ದೇಶದಲ್ಲಿ ವರದಿಯಾದ ಪ್ರಕರಣಗಳ ಪೈಕಿ ಶೇ 30ರಷ್ಟು ‘ಒಂದೇ ಸ್ಥಳ’ಕ್ಕೆ ಸಂಬಂಧಿಸಿದ್ದಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸೋಂಕಿನ 1,023 ಪ್ರಕರಣಗಳು ದೆಹಲಿಯ ನಿಜಾಮುದ್ದೀನ್‌ನಲ್ಲಿ ಕಳೆದ ತಿಂಗಳು ನಡೆದ ತಬ್ಲೀಗ್‌ ಜಮಾತ್‌ ಸಭೆಯ ಜತೆ ನಂಟು ಹೊಂದಿವೆ. ಈ ಸಭೆಯಲ್ಲಿ ಭಾಗವಹಿಸಿದವರು, ಅವರ ಸಂಪರ್ಕಕ್ಕೆ ಬಂದವರು ಸೇರಿ 22 ಸಾವಿರ ಜನರನ್ನು ದೇಶದ ವಿವಿಧ ಭಾಗಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ತಬ್ಲೀಗ್‌ ಸಭೆಯಲ್ಲಿ ಭಾಗವಹಿಸಿ ಸೋಂಕಿಗೆ ಒಳಗಾದವರನ್ನುಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಉತ್ತರ ಪ್ರದೇಶ ಸೇರಿ 17 ರಾಜ್ಯಗಳಲ್ಲಿ ಪತ್ತೆ ಮಾಡಲಾಗಿದೆ. ಒಟ್ಟು ಪ್ರಕರಣಗಳ ಪೈಕಿ ಶೇ 30ರಷ್ಟು ಒಂದೇ ಸ್ಥಳದಿಂದ ಪಸರಿಸಿದೆ. ಇದನ್ನು ಆರಂಭದಲ್ಲಿಯೇ ಗ್ರಹಿಸಿ ನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್‌ ಹೇಳಿದ್ದಾರೆ.

ADVERTISEMENT

ಪರೀಕ್ಷೆಗೆ ಒಳಗಾದ 25 ಸೋಂಕು ಶಂಕಿತರ ಪೈಕಿ ಒಬ್ಬರಲ್ಲಿ ಮಾತ್ರ ಸೋಂಕು ಪತ್ತೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪರೀಕ್ಷಾ ಸಾಮರ್ಥ್ಯವನ್ನು ದಿನಕ್ಕೆ 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಲಾಕ್‌ಡೌನ್‌ನ ಕಟ್ಟುನಿಟ್ಟಿನ ಪಾಲನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ,ವೈಯಕ್ತಿಕ ಮತ್ತು ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳುವುದರಿಂದ ಮಾತ್ರವೇ ಕೋವಿಡ್‌ ಪಿಡುಗನ್ನು ಸೋಲಿಸಲು ಸಾಧ್ಯ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಪುನರುಚ್ಚರಿಸಿದ್ದಾರೆ.

ದೇಶದಲ್ಲಿ ಶನಿವಾರ 600ಕ್ಕೂ ಹೆಚ್ಚು ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು ದೇಶದಲ್ಲಿ ಈವರೆಗೆ, ಒಂದೇ ದಿನ ಪತ್ತೆಯಾದ ಗರಿಷ್ಠ ಸಂಖ್ಯೆಯ ಪ್ರಕರಣಗಳು. ಕೋವಿಡ್‌ ಬಾಧಿತರ ಪೈಕಿ ಕೇರಳ, ದೆಹಲಿ ಮತ್ತು ಮಧ್ಯಪ್ರದೇಶದ 58 ಮಂದಿಯ ಸ್ಥಿತಿ ಗಂಭೀರವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 2,092, ಸಾವಿನ ಸಂಖ್ಯೆ 68 ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ, ವಿವಿಧ ರಾಜ್ಯಗಳು ನೀಡಿದ ಅಂಕಿ ಅಂಶ ಆಧರಿಸಿ ಸುದ್ದಿಸಂಸ್ಥೆ ನೀಡಿದ ಮಾಹಿತಿ ಪ್ರಕಾರ, ಒಟ್ಟು ಪ್ರಕರಣಗಳು 3,668, ಸಾವಿನ ಸಂಖ್ಯೆ 96 ಮತ್ತು ಗುಣಮುಖರಾದವರು 277.

ಗುರಿಕೇಂದ್ರಿತ ಕಾರ್ಯತಂತ್ರ

* ಸೋಂಕು ಹರಡುವಿಕೆಯ ಅಪಾಯ ಹೆಚ್ಚಾಗಿರುವ ಪ್ರದೇಶಗಳನ್ನು ಗುರುತಿಸಿ, ಸೋಂಕಿಗೆ ತಡೆ ಒಡ್ಡುವ ಕಾರ್ಯತಂತ್ರ ರೂಪಿಸಲಾಗಿದೆ. ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್‌, ಕರ್ನಾಟಕ, ತೆಲಂಗಾಣ, ದೆಹಲಿ ಮತ್ತು ಲಡಾಖ್‌ನ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ

* ಆರಂಭಿಕ ಹಂತದಲ್ಲಿಯೇ ಸೋಂಕು ಗುರುತಿಸಿ, ಆ ಭೌಗೋಳಿಕ ಪ್ರದೇಶದಿಂದ ಸೋಂಕು ಹೊರಗೆ ಪಸರಿಸದಂತೆ ಮಾಡಲು ಯೋಜನೆ

* ಪ್ರಯಾಣ ಆಧರಿಸಿ ವರದಿಯಾದ ಪ್ರಕರಣಗಳು, ಸ್ಥಳೀಯವಾಗಿ ಹರಡುವಿಕೆ, ತಡೆಯೊಡ್ಡಲು ಸಾಧ್ಯವಿರುವ ದೊಡ್ಡ ಪ್ರಮಾಣದ ಹರಡುವಿಕೆ, ಸಾಮುದಾಯಿಕ ಹರಡುವಿಕೆ ಮತ್ತು ದೇಶಕ್ಕೆ ವ್ಯಾಪಿಸುವ ಪಿಡುಗು ಎಂಬ ಐದು ಸಾಧ್ಯತೆಗಳನ್ನು ಗಮನದಲ್ಲಿ ಇರಿಸಿಕೊಂಡು ಆರೋಗ್ಯ ಸಚಿವಾಲಯ ಕೆಲಸ ಮಾಡುತ್ತಿದೆ

* ದೊಡ್ಡ ಪ್ರಮಾಣದ ಹರಡುವಿಕೆ ತಡೆಗಟ್ಟುವುದಕ್ಕೆ ಜನರ ಪ್ರಯಾಣ ನಿಷೇಧವೊಂದೇ ದಾರಿ. ಇಂತಹ ಭೌಗೋಳಿಕ ಪ್ರದೇಶಗಳನ್ನು ಗುರುತಿಸಿ, ಇತರ ಪ್ರದೇಶಗಳ ಜತೆಗೆ ಯಾವುದೇ ಸಂಪರ್ಕ ಇಲ್ಲದಂತೆ ಮಾಡುವುದು ಕಾರ್ಯತಂತ್ರ

* ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡಬಹುದು. ಆದರೆ, ದೇಶದಾದ್ಯಂತ ಅದು ಏಕರೂಪದಲ್ಲಿ ಇರುವ ಸಾಧ್ಯತೆ ಕಡಿಮೆ. ಸೋಂಕು ಶಂಕೆ ಇರುವ ಎಲ್ಲರನ್ನೂ ಗುರುತಿಸಿ, ಪರೀಕ್ಷೆಗೆ ಒಳಪಡಿಸಿ, ಅವರು ಇತರರ ಜತೆ ಸಂಪರ್ಕಕ್ಕೆ ಬರುವುದನ್ನು ತಡೆಯುವ ಮೂಲಕ ಸೋಂಕು ವ್ಯಾಪಿಸುವಿಕೆಗೆ ಕಡಿವಾಣ

*ಸೋಂಕು ಇರುವ ಪ್ರದೇಶಗಳ ಸಂಖ್ಯೆ ಮತ್ತು ವಿಸ್ತಾರ, ಭಾರತದಲ್ಲಿ ಸೋಂಕು ಹರಡುವಿಕೆಯ ವೇಗ, ಅದರ ಮೇಲೆ ಪ್ರಭಾವ ಬೀರುವ ವಾತಾವರಣದ ಅಂಶಗಳ (ಉಷ್ಣತೆ ಮತ್ತು ವಾತಾವರಣದಲ್ಲಿನ ತೇವಾಂಶ) ಆಧಾರದಲ್ಲಿ ಕಾರ್ಯಯೋಜನೆ

ಎಲ್ಲೆಲ್ಲಿ ಎಷ್ಟೆಷ್ಟು?

ಕರ್ನಾಟಕ - 144

ಬೆಂಗಳೂರು - 55

ಮೈಸೂರು -28

ದಕ್ಷಿಣ ಕನ್ನಡ -12

ಬೀದರ್ -10

ಉತ್ತರ ಕನ್ನಡ - 08

ಚಿಕ್ಕಬಳ್ಳಾಪುರ - 07

ಕಲಬುರ್ಗಿ - 05

ಬಳ್ಳಾರಿ - 05

ದಾವಣಗೆರೆ - 03

ಉಡುಪಿ - 03

ಬೆಳಗಾವಿ - 03

ತುಮಕೂರು - 01

ಕೊಡಗು - 01

ಧಾರವಾಡ - 01

ಬಾಗಲಕೋಟೆ - 01

ಬೆಂಗಳೂರು ಗ್ರಾಮಾಂತರ - 01

ವಯೋಮಾನ ಆಧರಿಸಿ ಸೋಂಕು ಪ್ರಮಾಣ

0ಯಿಂದ 20: ಶೇ 8

21ರಿಂದ 40: ಶೇ 42

41ರಿಂದ 60: ಶೇ 33

60ಕ್ಕಿಂತ ಮೇಲೆ: ಶೇ 17

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.