ಬೆಂಗಳೂರು: ‘ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡೀ ಸರ್ಕಾರ ಸಿಲುಕಿಕೊಂಡಿದ್ದು, ಪೂರ್ಣ ತನಿಖೆಯಾದರೆ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕಾಗುತ್ತದೆ. ಹೀಗಾಗಿಯೇ ಅವರು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದರೆ ಭ್ರಷ್ಟಾಚಾರದ ಬ್ರಹ್ಮ ಯಾರು ಎಂಬುದು ಎಲ್ಲರಿಗೂ ಗೊತ್ತಾಗಿದೆ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಾಲ್ಮೀಕಿ ನಿಗಮದ ಹಣ ಚುನಾವಣೆಗೆ ಬಳಕೆಯಾಗಿದೆ. ಆ ಹಣದಲ್ಲಿ ಮದ್ಯ ಖರೀದಿಸಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ತಾವು ಎಲ್ಲಿ ಸಿಲುಕಿಕೊಳ್ಳುತ್ತೀವೋ ಎಂಬ ಭಯದಲ್ಲಿ ಬಿಜೆಪಿ ಅವಧಿಯಲ್ಲಿ 21 ಹಗರಣ ಆಗಿದೆ ಎನ್ನುತ್ತಿದ್ದಾರೆ. ಅವುಗಳಿಗೆ ದಾಖಲೆಗಳನ್ನು ನೀಡಬೇಕಿತ್ತು’ ಎಂದರು.
‘ಎಲ್ಲ ಇಲಾಖೆಗಳಲ್ಲೂ ನಡೆದಿರುವ ಹಗರಣಗಳು ಹೊರಬರುತ್ತಿವೆ. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ ಎನ್ನುವಂತಾಗಿದೆ. ತಮ್ಮ ವಿರುದ್ಧ ಬಂದಿರುವ ಆರೋಪಗಳಿಂದ ರಕ್ಷಣೆ ಪಡೆಯಲು ಪೊಲೀಸ್ ಇಲಾಖೆಯನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಹಗರಣವೂ ಶೀಘ್ರ ಹೊರಗೆ ಬರಲಿದೆ. ಸರ್ಕಾರದ ಭ್ರಷ್ಟಾಚಾರದ ವಿರುದ್ದದ ಹೋರಾಟ ಸದನದ ಹೊರಗೆ ಹಾಗೂ ಒಳಗೆ ಮುಂದುವರೆಯಲಿದೆ’ ಎಂದು ಹೇಳಿದರು.
ಪ್ರವಾಹ ನಿರ್ಲಕ್ಷ್ಯ: ‘ಬರ ಮತ್ತು ಪ್ರವಾಹದ ವಿಚಾರದಲ್ಲಿ ಈ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ನಮ್ಮ ಕೇಂದ್ರ ಸಚಿವರು, ಪಕ್ಷದ ನಾಯಕರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡಿದ ನಂತರ ಸಿಎಂ ಭೇಟಿ ಮಾಡಿದ್ದಾರೆ. ಕೇಂದ್ರ ಸರ್ಕಾರ ₹700 ಕೋಟಿ ನೀಡಿದೆ. ಬರ ಬಂದಾಗಲೂ ಇವರು ಹಣ ಬಿಡುಗಡೆ ಮಾಡಲಿಲ್ಲ. ಈಗಲೂ ಬಿಡುಗಡೆ ಮಾಡಿಲ್ಲ. ಈ ಸರ್ಕಾರಕ್ಕೆ ಒಳ್ಳೆಯ ಆಡಳಿತ ಕೊಡುವ ಉದ್ದೇಶ ಇಲ್ಲ’ ಎಂದು ಬೊಮ್ಮಾಯಿ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.