ADVERTISEMENT

ಮಂಗಳೂರು: ಇ–ಖಾತೆ ಮಾಡಿಸಲು ಬ್ರೋಕರ್ ಇದ್ದರೆ ಕೆಲಸ ಸಲೀಸು!

ಸಂಧ್ಯಾ ಹೆಗಡೆ
Published 5 ಜೂನ್ 2022, 19:46 IST
Last Updated 5 ಜೂನ್ 2022, 19:46 IST
ಜಿ.ಕೆ.ಭಟ್
ಜಿ.ಕೆ.ಭಟ್   

ಮಂಗಳೂರು: ‘ಇ–ಖಾತೆ ಮಾಡಿಸಲು ತಿಂಗಳಿಂದ ಪಾಲಿಕೆಗೆ ಅಲೆದು, ನೆತ್ತಿಸುಡುವ ಬಿಸಿಲಿನಲ್ಲಿ ಮಂಡೆಬಿಸಿ ಮಾಡಿಕೊಂಡಿದ್ದೇ ಬಂತು. ನನ್ನ ಸ್ನೇಹಿತ, ಬ್ರೋಕರ್‌ ಒಬ್ಬರನ್ನು ಪರಿಚಯಿಸಿದ. ಆತ ನಾಲ್ಕು ದಿನಗಳಲ್ಲಿ ವ್ಯವಸ್ಥಿತವಾಗಿ ಎಲ್ಲ ದಾಖಲೆಗಳನ್ನು ನನ್ನ ಕೈಗಿತ್ತ’ ಎಂದು ಮಹಾನಗರ ಪಾಲಿಕೆಗೆ ಬಂದಿದ್ದ ವ್ಯಕ್ತಿಯೊಬ್ಬರು ಸಹಜವೆಂಬಂತೆ ಇದನ್ನು ಹೇಳುತ್ತಿದ್ದರು.

‘ಇ– ಖಾತೆ ಮಾಡಲು ಸ್ಟ್ಯಾಂಪ್ ಡ್ಯೂಟಿ ಶೇ 2ರಷ್ಟು ಪಾವತಿಸಬೇಕು. ಈ ಮೊತ್ತ ಆಧರಿಸಿ, ಅಧಿಕಾರಿಯ ‘ಪಾವತಿ’ಯೂ ನಿರ್ಧಾರವಾಗುತ್ತದೆ’ ಎಂದು ಪಿಸುದನಿಯಲ್ಲಿ ಹೇಳಿದರು.

‘ಕಟ್ಟಡ ಪರ ವಾನಗಿ, ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ, ಅಂಗಡಿ ವಿಸ್ತರಣೆ, ಸಿವಿಲ್‌ ಗುತ್ತಿಗೆ ಕಾಮಗಾರಿಗಳು ಹೀಗೆ ಎಲ್ಲದಕ್ಕೂ ಅಧಿಕಾರಿಗಳ ಕೈಬಿಸಿ ಮಾಡಿದರೆ ಮಾತ್ರಜನರಿಗೆ ಮೊಸರು ಸಿಗುವುದು. ಪಾಲಿಕೆಯಲ್ಲಿ ಯಾವ ಕ್ಷೇತ್ರದಲ್ಲಿ ಭ್ರಷ್ಟಾಚಾರ ಇಲ್ಲ ಎಂದು ಹುಡುಕಿ ಹೇಳುವುದು ಕಷ್ಟ’ ಎನ್ನುತ್ತ ಮಾತಿಗಿಳಿದರು ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್.

ADVERTISEMENT

‘ತ್ಯಾಜ್ಯದಲ್ಲಿ ಕಾಸು ಎಣಿಸುವ, ಒಂದು ಅಡಿ ಆಳದ ಗುಂಡಿ ತೆಗೆದು, ಮೂರು ಅಡಿಗೆ ಬಿಲ್ ತೋರಿಸುವ ವಿಚಾರ ಬಹಿರಂಗ ಗುಟ್ಟಿನಂತೆ. ಇಂತಹ ವಹಿವಾಟಿಗೆ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಒಗ್ಗಟ್ಟು ಪ್ರದರ್ಶಿಸುತ್ತಾರೆ. ಪಾಲಿಕೆ ಮುಖ್ಯಸ್ಥರಿಗೆ ಅರಿವಿದ್ದೋ, ಇಲ್ಲದೆಯೋ ಇಂತಹ ವ್ಯವಹಾರಗಳು ಎಗ್ಗಿಲ್ಲದೆ ನಡೆಯುತ್ತವೆ. ಸ್ಮಾರ್ಟ್ ಸಿಟಿ ಯೋಜನೆಯಂತೂ ಭ್ರಷ್ಟಾಚಾರದ ಕೇಂದ್ರವಾಗಿದೆ. ಜನರ ತೆರಿಗೆ ಹಣದಲ್ಲಿ ದುಂದುವೆಚ್ಚ ಆಗುತ್ತಿದೆ’ ಎಂದು ನೇರ ಆರೋಪ ಮಾಡಿದರು.

‘ಕೆಲವು ಫಾಸ್ಟ್‌ಫುಡ್ ರೆಸ್ಟೋ ರೆಂಟ್‌ಗಳು ರಾಜಾರೋಷವಾಗಿ ನಿಷೇಧಿತ ಆಹಾರ ಪದಾರ್ಥಗಳನ್ನು ಬಳಸುತ್ತವೆ. ಪಾಲಿಕೆಯ ಆರೋಗ್ಯ ವಿಭಾಗದವರನ್ನು ಅವರು ಚೆನ್ನಾಗಿ ನೋಡಿಕೊಂಡರಾಯಿತು’ ಎನ್ನುವಾಗ ಜಿ.ಕೆ.ಭಟ್ ಅವರ ಮಾತಿನಲ್ಲಿ ಆಕ್ರೋಶವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.