ADVERTISEMENT

ಉತ್ತರಕರ್ನಾಟಕ: ಜಮೀನುಗಳಲ್ಲಿ ಕೊಳೆಯುತ್ತಿದೆ ಹತ್ತಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 19:45 IST
Last Updated 12 ಏಪ್ರಿಲ್ 2020, 19:45 IST
ಜಮೀನಿನಲ್ಲಿ ಹತ್ತಿ ಬಿಡಿಸುತ್ತಿರುವ ರೈತರು
ಜಮೀನಿನಲ್ಲಿ ಹತ್ತಿ ಬಿಡಿಸುತ್ತಿರುವ ರೈತರು   

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಹಿಂಗಾರು ಬೆಳೆಗಳಲ್ಲಿ ಒಂದಾದ ಹತ್ತಿ ಈ ಬಾರಿ ಉತ್ತಮ ಫಸಲು ಇದ್ದರೂ, ಲಾಕ್‌ಡೌನ್‌ನಿಂದಾಗಿ ಕೈಗೆ ಬಂದ ತುತ್ತು ರೈತರ ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.

ಕೆಲ ತಿಂಗಳ ಹಿಂದೆ ಭಾರಿ ಮಳೆ ಮತ್ತು ಪ್ರವಾಹ ಬೆಳೆಗಳನ್ನು ಆಪೋಶನ ತೆಗೆದುಕೊಂಡಿತ್ತು. ಇದೀಗ, ಹೊಲದಲ್ಲಿರುವ ಬೆಳೆಯನ್ನು ಕೊಯ್ಲು ಮಾಡಲೂ ಆಗದ ಸಂದಿಗ್ಧ ಸ್ಥಿತಿಯಲ್ಲಿ ರೈತ ಸಿಲುಕಿದ್ದಾನೆ. ಎಕರೆಗಟ್ಟಲೆ ಹತ್ತಿ, ಹೊಲದಲ್ಲೇ ಕೊಳೆಯುತ್ತಿದೆ. ಕಣ್ಣೆದುರಿಗೇ ಮಣ್ಣು ಪಾಲಾಗುತ್ತಿರುವ ಬೆಳೆ ನೋಡಿ ರೈತ ಕಣ್ಣೀರಿಡುತ್ತಿದ್ದಾನೆ.

ಕಾರ್ಮಿಕರ ಕೊರತೆ: ‘ಲಾಕ್‌ಡೌನ್ ಕಾರಣದಿಂದ ಕೂಲಿಯವರು ಕೆಲಸಕ್ಕೆ ಬರುವುದನ್ನೇ ನಿಲ್ಲಿಸಿದ್ದಾರೆ’ ಎಂದು 8 ಎಕರೆಯಲ್ಲಿ ಹತ್ತಿ ಬೆಳೆದಿರುವ ಕುಸುಗಲ್‌ನ ರೈತ ಫಕ್ಕೀರಯ್ಯ ಹಿರೇಮಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಸ್ಥಳೀಯವಾಗಿ ಸಿಗುವುದಿಲ್ಲ. ಬೇರೆ ಊರುಗಳಿಂದಲೇ ವಾಹನ ವ್ಯವಸ್ಥೆ ಮಾಡಿ ಕರೆಸಬೇಕು. ಬಂದರೂ ಹೆಚ್ಚಿನ ಕೂಲಿ ಕೇಳುತ್ತಾರೆ. ಹಾಗಾಗಿ, ಕುಟುಂಬದವರೇ ಸಿಕ್ಕಷ್ಟು ಸಿಗಲಿ ಎಂದು ಬಿಡಿಸುತ್ತಿದ್ದೇವೆ’ ಎಂದು ಹೇಳಿದರು.‌‘ಏ. 14ಕ್ಕೆ ಲಾಕ್‌ಡೌನ್ ಮುಗಿದಿದ್ದರೆ, ಅಷ್ಟೇನೂ ತೊಂದರೆಯಾಗುತ್ತಿರಲಿಲ್ಲ. ಆದರೆ, ತಿಂಗಳಾಂತ್ಯದವರೆಗೆ ವಿಸ್ತರಿಸಿರುವುದರಿಂದ ಬಹುತೇಕ ಬೆಳೆ ನೆಲದ ಪಾಲಾಗಲಿದೆ‘ ಎಂದು ಆತಂಕ ವ್ಯಕ್ತಪಡಿಸಿದರು.

ಕೈ ಕೊಟ್ಟ ಬೆಲೆ: ‘ಕ್ವಿಂಟಲ್‌ಗೆ ₹4 ಸಾವಿರವಿದ್ದ ಹತ್ತಿ ಬೆಲೆ ಈಗ, ₹2,500ಕ್ಕೆ ಇಳಿದಿದೆ. ರೈತರು ಬದುಕುವುದು ಹೇಗೆ? ಸಾಲ ಪಾವತಿಸಲು ಏನು ಮಾಡಬೇಕು?’ ಎಂದು ಹುಬ್ಬಳ್ಳಿಯ ರೈತ ಸಿದ್ಧಪ್ಪ ಹೆಬಸೂರ ಬೇಸರ ವ್ಯಕ್ತಪಡಿಸಿದರು.

‘ಸರ್ಕಾರ ಹತ್ತಿಯನ್ನು ಬೆಂಬಲ ಬೆಲೆಗೆ ಖರೀದಿಸುತ್ತಿದೆ. ಆದರೆ, ಅಲ್ಲಿ ಹೆಚ್ಚಿನ ಲಾಭ ನಿರೀಕ್ಷಿಸುವಂತಿಲ್ಲ. ಹಾಕಿದ ಬಂಡವಾಳ ಕೈ ಸೇರಬಹುದಷ್ಟೇ. ಒಟ್ಟಿನಲ್ಲಿ ಬೆಳೆಗೆ ಒಂದಲ್ಲ, ಒಂದು ಕಂಟಕ ಇದ್ದೇ ಇರುತ್ತದೆ’ ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.