ADVERTISEMENT

ಕಾರ್ಮಿಕ‌ ತಿದ್ದುಪಡಿ ಮಸೂದೆಗೆ ಸೋಲು

ಮಸೂದೆ ಪರ 14, ಮಸೂದೆ ವಿರುದ್ಧ 26 ಮತ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 18:24 IST
Last Updated 26 ಸೆಪ್ಟೆಂಬರ್ 2020, 18:24 IST

ಬೆಂಗಳೂರು: 300 ಕ್ಕಿಂತ ಕಡಿಮೆ ಸಂಖ್ಯೆಯ ಕಾರ್ಮಿಕರು ಇರುವ ಉದ್ದಿಮೆಗಳನ್ನು ಸರ್ಕಾರದ ಒಪ್ಪಿಗೆ ಪಡೆಯದೇ ಮುಚ್ಚಲು ಅವಕಾಶ ಕಲ್ಪಿಸುವ ಕೈಗಾರಿಕಾ ವಿವಾದಗಳು ಮತ್ತು ಇತರೆ ಕೆಲವು ಕಾನೂನುಗಳ (ಕರ್ನಾಟಕ ತಿದ್ದುಪಡಿ) ಮಸೂದೆ ವಿಧಾನ ಪರಿಷತ್‌ನಲ್ಲಿ ಸೋಲು ಕಂಡಿದೆ.

ಕಾರ್ಮಿಕ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ್ ಶನಿವಾರ ರಾತ್ರಿ ಪರಿಷತ್ ನಲ್ಲಿ ಮಸೂದೆಯನ್ನು ಮಂಡಿಸಿದರು. ಕಾರ್ಮಿಕರ ವಿರುದ್ಧ ಇರುವ‌ ಮಸೂದೆಯನ್ನು ವಾಪಸ್ ಪಡೆಯುವಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಆಗ್ರಹಿಸಿದವು.

ಹೆಚ್ಚುವರಿ ಕೆಲಸದ ಅವಧಿಯನ್ನು ಮೂರು ತಿಂಗಳ ಅವಧಿಗೆ 75 ಗಂಟೆಗಳಿಂದ 125 ಗಂಟೆಗೆ ಹೆಚ್ಚಿಸುವ ಪ್ರಸ್ತಾವ ಮಸೂದೆಯಲ್ಲಿದೆ. ಅಲ್ಲದೇ ಗುತ್ತಿಗೆ ಕಾರ್ಮಿಕರ ನಿಯಂತ್ರಣ ಕಾಯ್ದೆ ಅನ್ವಯವಾಗಲು ಕನಿಷ್ಠ ಕಾರ್ಮಿಕರ ಸಂಖ್ಯೆಯನ್ನು ಹತ್ತರಿಂದ ಇಪ್ಪತ್ತಕ್ಕೆ ಹೆಚ್ಚಿಸುವ ಪ್ರಸ್ತಾವವಿದೆ.

ADVERTISEMENT

ಮಸೂದೆಯನ್ನು ಹಿಂಪಡೆಯುವಂತೆ ಅಥವಾ ಜಂಟಿ‌ ಪರಿಶೀಲನಾ ಸಮಿತಿಗೆ ಒಪ್ಪಿಸುವಂತೆ ವಿರೋಧ ಪಕ್ಷದ ನಾಯಕ‌ ಎಸ್.ಆರ್. ಪಾಟೀಲ, ಕಾಂಗ್ರೆಸ್ ನ ಕೆ.ಸಿ. ಕೊಂಡಯ್ಯ, ಬಿ.ಕೆ. ಹರಿಪ್ರಸಾದ್, ಎಂ. ನಾರಾಯಣಸ್ವಾಮಿ, ಜೆಡಿಎಸ್ ನ ಬಸವರಾಜ ಹೊರಟ್ಟಿ, ಮರಿತಿಬ್ಬೇಗೌಡ ಸೇರಿದಂತೆ ಹಲವರು ಆಗ್ರಹಿಸಿದರು. ಆರಂಭದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ಕೂಡ ಮಸೂದೆಯನ್ನು ವಿರೋಧಿಸಿದ್ದರು.

ಮಸೂದೆಯನ್ನು ಹಿಂಪಡೆಯಲು ಸರ್ಕಾರ ಒಪ್ಪಲಿಲ್ಲ. ಪ್ರತಿಪಕ್ಷಗಳ ಬೇಡಿಕೆಯಂತೆ ಮಸೂದೆಯನ್ನು ಮತಕ್ಕೆ ಹಾಕಲಾಯಿತು.

ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಮತ ವಿಭಜನೆಗೆ ಸೂಚಿಸಿದರು. ಮಸೂದೆಯ ಪರವಾಗಿ 14 ಮತಗಳು ಲಭಿಸಿದರೆ, ಮಸೂದೆಯ ವಿರುದ್ಧ 26 ಮತಗಳು ಲಭಿಸಿದವು. ‌ಮಸೂದೆ ತಿರಸ್ಕೃತಗೊಂಡಿದೆ ಎಂದು ಸಭಾಪತಿ ಪ್ರಕಟಿಸಿದರು.

ಈ ವಿಷಯ ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಮಧ್ಯೆಭಾರಿ ವಾಕ್ಸಮರಕ್ಕೂ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.