ADVERTISEMENT

ಪರಿಷತ್‌ ಸದಸ್ಯರ ಆಯ್ಕೆ ಸರಿಯಾಗಿ ನಡೆಯುತ್ತಿಲ್ಲ: ಸಭಾಪತಿ ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 9:41 IST
Last Updated 12 ಫೆಬ್ರುವರಿ 2022, 9:41 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯರ ಆಯ್ಕೆ ಸಮರ್ಪಕವಾಗಿ ನಡೆಯುತ್ತಿಲ್ಲ. ಕಲೆ, ಸಾಹಿತ್ಯ, ರಂಗಭೂಮಿ ಮತ್ತಿತರ ಕ್ಷೇತ್ರಗಳ ಸಾಧಕರಿಗೆ ಮೀಸಲಾಗಿದ್ದ ಸ್ಥಾನಗಳನ್ನೂ ಚುನಾವಣೆಗಳಲ್ಲಿ ಸೋತ ರಾಜಕಾರಣಿಗಳಿಗೆ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಹಿತಿ ಎಂದು ಹೇಳಿಕೊಂಡು ಪುಸ್ತಕ ಬರೆದ ರಾಜಕಾರಣಿಯನ್ನು ಪರಿಷತ್‌ಗೆ ತಂದು ಕೂರಿಸುತ್ತಾರೆ. ಚುನಾವಣೆಯಲ್ಲಿ ಸೋತವರನ್ನು ಇಲ್ಲಿ ನಾಯಕರನ್ನಾಗಿ ಮಾಡಲಾಗುತ್ತಿದೆ. ಇದರಿಂದಾಗಿ ಮೇಲ್ಮನೆಯ ಕುರಿತು ಟೀಕೆಗಳು ಬರುವಂತಾಗಿದೆ’ ಎಂದರು.

ಡಿ.ವಿ. ಗುಂಡಪ್ಪ, ಸಿದ್ದಲಿಂಗಯ್ಯ, ಖಾದ್ರಿ ಶಾಮಣ್ಣ, ಎ.ಕೆ. ಸುಬ್ಬಯ್ಯ ಅವರಂತಹ ಮಹಾನ್‌ ವ್ಯಕ್ತಿಗಳು ಸದಸ್ಯರಾಗಿದ್ದ ಸದನ ಇದು. ಬೆಳಿಗ್ಗೆ 9.30ಕ್ಕೆ ಆರಂಭವಾಗುವ ಕಲಾಪ ರಾತ್ರಿಯವರೆಗೂ ನಡೆಯುತ್ತಿತ್ತು. ಈಗ ಚುನಾವಣೆಗಳಲ್ಲಿ ಸೋತವರು ಬಳಿಕ ಮೇಲ್ಮನೆ ಸದಸ್ಯರಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.

ADVERTISEMENT

ಆಯಾ ಕ್ಷೇತ್ರಗಳಿಗೆ ಮೀಸಲಾದ ಸ್ಥಾನಗಳನ್ನು ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಬೇಕು. ಯಾವುದೇ ಪಕ್ಷದ ಸರ್ಕಾರ ಇದ್ದರೂ ಈ ನೀತಿ ಪಾಲಿಸಬೇಕು. ಆಗ ಮೇಲ್ಮನೆಯ ಗೌರವ ಹೆಚ್ಚಿಸಬಹುದು. ಈ ದಿಸೆಯಲ್ಲಿ ಎಲ್ಲರೂ ಪ್ರಾಮಾಣಿಕವಾದ ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು.

60 ದಿನ ಕಲಾಪ ಅಗತ್ಯ: ವರ್ಷಕ್ಕೆ 60 ದಿನಗಳ ಕಾಲ ವಿಧಾನಮಂಡಲ ಕಲಾಪ ನಡೆಯಬೇಕು ಎಂಬುದು ತಮ್ಮ ನಿಲುವು. ಆದರೆ, ಸರ್ಕಾರದ ನಿರ್ಧಾರಕ್ಕೆ ತಕ್ಕಂತೆ ಕಲಾಪ ನಡೆಸಬೇಕಾಗುತ್ತದೆ. 2017ರಲ್ಲಿ 40 ದಿನ, 2018ರಲ್ಲಿ 29 ದಿನ, 2019ರಲ್ಲಿ 20 ದಿನ, 2020ರಲ್ಲಿ 33 ದಿನ ಮತ್ತು 2021ರಲ್ಲಿ 42 ದಿನಗಳ ಕಾಲ ಮಾತ್ರ ಕಲಾಪ ನಡೆಸಲಾಗಿದೆ ಎಂದರು.

ಇದೇ 14ರಿಂದ ಆರಂಭವಾಗುವ ವಿಧಾನ ಪರಿಷತ್‌ ಅಧಿವೇಶನದಲ್ಲಿ ಸಾರ್ವಜನಿಕರ ಸಮಸ್ಯೆಗಳ ಕುರಿತು ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸದನದ ಒಳಗೆ ಭಿತ್ತಿಪತ್ರ ಮತ್ತಿತರ ಸಾಧನಗಳನ್ನು ಬಳಸಿ ಪ್ರತಿಭಟನೆ ನಡೆಸಲು ಅವಕಾಶ ನೀಡವುದಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೊರಟ್ಟಿ ತಿಳಿಸಿದರು.

ಚುನಾವಣಾ ಸುಧಾರಣೆ ಕುರಿತು ಚರ್ಚೆ: ಚುನಾವಣೆಗಳಲ್ಲಿ ಸುಧಾರಣೆ ತರುವ ಕುರಿತು ಚರ್ಚೆ ನಡೆಸಲು ಚಿಂತನೆ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ಸಾಧ್ಯವಾದರೆ ಈ ಅಧಿವೇಶನದಲ್ಲೇ ಅರ್ಧ ದಿನ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಅಡ್ಡ ದಾರಿ ಹಿಡಿಸುವ ಕೆಲಸ: ಹಿಜಾಬ್‌– ಕೇಸರಿ ಶಾಲು ವಿವಾದದ ಕುರಿತು ಪ್ರತಿಕ್ರಿಯಿಸಿದ ಸಭಾಪತಿ, ‘ಮಕ್ಕಳನ್ನು ಅಡ್ಡ ದಾರಿ ಹಿಡಿಸುವ ಕೆಲಸವನ್ನು ಪೋಷಕರು ಮತ್ತು ರಾಜಕಾರಣಿಗಳು ಮಾಡುತ್ತಿದ್ದಾರೆ. ಇಂತಹ ಕೆಟ್ಟ ಸಂಪ್ರದಾಯವನ್ನು ಶಾಲೆಗಳಲ್ಲಿ ತರಬಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.