ADVERTISEMENT

ಅಲ್ಪಸಂಖ್ಯಾತ ಹಕ್ಕು ಹತ್ತಿಕ್ಕಿದರೆ ದೇಶಕ್ಕೆ ಗಂಡಾಂತರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 9:10 IST
Last Updated 18 ಡಿಸೆಂಬರ್ 2018, 9:10 IST

ಬೆಳಗಾವಿ:ಭಾರತ ಒಂದು ಮತಕ್ಕೆ ಸೇರಿದ ರಾಷ್ಟ್ರವಲ್ಲ. ಬಹುಮತೀಯ ರಾಷ್ಟ್ರ. ಸಂವಿಧಾನಬದ್ಧವಾಗಿರುವ ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕಲು ಹೋದರೆ ದೇಶಕ್ಕೆ ಗಂಡಾಂತರ ಎದುರಾಗುತ್ತದೆ. ಅವರ ಹಿತ ಕಾಪಾಡುವಲ್ಲಿ ವಿಫಲರಾದವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಎಚ್ಚರಿಸಿದರು.

ಕರ್ನಾಟಕ ಅಲ್ಪ ಸಂಖ್ಯಾತರ ಆಯೋಗದ ವತಿಯಿಂದ ಮಂಗಳವಾರ ಸುವರ್ಣ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಹಕ್ಕುಗಳ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಹೆಸರಿನಲ್ಲಿ ಗಲಾಟೆ ಮಾಡುವುದು. ಬಲಹೀನರು ಎಂದು ಗಧಾಪ್ರಹಾರ ಮಾಡಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುವುದು ಸರಿಯಲ್ಲ. ಯಾರಿಗೆ ಈ ದೇಶದ ಮೇಲೆ ಭಕ್ತಿ ಇಲ್ಲ. ಅಲ್ಪಸಂಖ್ಯಾತರಿಗಿಲ್ಲವೇ ಎಂದು ಪ್ರಶ್ನಿಸಿದ ಅವರು, ಸಂವಿಧಾನದ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ಟೀಕಿಸಿದರು.

ADVERTISEMENT

ಸಂವಿಧಾನದ ಹಕ್ಕುಗಳನ್ನು ಮೊಟಕುಗೊಳಿಸಲು ಸಂವಿಧಾನ ತಿದ್ದುಪಡಿ ಮಾಡಲು ಹೊರಟವರಿಗೆ ಸಂವಿಧಾನದ ತಾತ್ಪರ್ಯ ಗೊತ್ತಿಲ್ಲ ಎಂದು ಹೇಳಬೇಕಾಗುತ್ತದೆ ಎಂದರು.

ಅಲ್ಪಸಂಖ್ಯಾತರಿಗೆ ಸಂವಿಧಾನವೇ ಹಕ್ಕುಗಳನ್ನು ನೀಡಿದೆ. ಅವರಿಗೆ ನೀಡುತ್ತಿರುವುದು ಭಿಕ್ಷೆಯಲ್ಲ, ಹಕ್ಕು ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು. ಇಲ್ಲಿರುವ ಅಲ್ಪಸಂಖ್ಯಾತರು ಅಫ್ಘಾನಿಸ್ತಾನದಿಂದ ಬಂದವರಲ್ಲ. ಇಲ್ಲಿಯೇ ಹುಟ್ಟಿ ಬೆಳೆದವರು. ಬೇರೆಯವರಿಗೆ ಇರುವ ಹಕ್ಕು ನಿಮಗೂ ಇದೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಮಾತನಾಡಿ, ಸ್ವಾತಂತ್ರ್ಯದ ನಂತರ ಅಲ್ಪಸಂಖ್ಯಾತರ ಸ್ಥಿತಿ ಗತಿ ತಿಳಿಯುವ ಕೆಲಸ ಆಗಿರಲಿಲ್ಲ. ಸಾಚಾರ್ ಸಮಿತಿ ಅವರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವುದನ್ನು ತಿಳಿಸಿತು. ಆ ನಂತರವಷ್ಟೇ ಅವರಿಗೆ ಆದ್ಯತೆ ಸಿಕ್ಕಿದೆ ಎಂದರು.

2013ರವರೆಗೆ ರಾಜ್ಯದಲ್ಲಿ ಅಲ್ಪಸಂಖ್ಯಾತರ ಇಲಾಖೆಗೆ ಕೇವಲ ₹ 400 ಕೋಟಿ ಮಾತ್ರ ನೀಡಲಾಗುತ್ತಿತ್ತು. ಅದನ್ನು ₹ 3 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಮಾತನಾಡಿ, ರಾಜ್ಯದಲ್ಲಿ ಶೇ 17 ರಷ್ಟು ಅಲ್ಪ ಸಂಖ್ಯಾತರಿದ್ದವೆ. ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ ನೀಡಬೇಕು. ₹ 3,150 ಕೋಟಿ ಬಜೆಟ್‌ ಅಲ್ಪಸಂಖ್ಯಾತರ ಇಲಾಖೆಗಿದೆ. ಅದನ್ನು ₹ 22 ಸಾವಿರ ಕೋಟಿಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಐವಾನ್‌ ಡಿಸೋಜಾ ಮಾತನಾಡಿ, ಮಾಂಸ ಸಾಗಿಸುವವರ ಹಾಗೂ ಪ್ರೇಮಿಗಳ ಮೇಲೆ ಹಲ್ಲೆ ನಡೆಸುವ ಮೂಲಕ ದಬ್ಬಾಳಿಕೆ ಮಾಡಲಾಗುತ್ತಿದೆ. ಅದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಸಚಿವರಾದ ಯು.ಟಿ. ಖಾದರ್, ಕೆ.ಜೆ. ಜಾರ್ಜ್‌, ಶಾಸಕರಾದ ನಸೀರ್‌ ಅಹಮ್ಮದ್‌, ತನ್ವೀರ್ ಸೇಠ, ಸಿ.ಎಂ. ಇಬ್ರಾಹಿಂ, ಖನೀಜಾ ಫಾತೀಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.