ADVERTISEMENT

ರಾಜಕೀಯ ನಾಶಕ್ಕೆ ಚಾರಿತ್ರ್ಯವಧೆ: ಶಾಸಕ ಹರತಾಳು ಹಾಲಪ್ಪ

ಉಮಾಶ್ರೀ ವಿರುದ್ಧದ ಮಾನನಷ್ಟ ಪ್ರಕರಣದ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 20:16 IST
Last Updated 1 ಜೂನ್ 2019, 20:16 IST
ಹರತಾಳು ಹಾಲಪ್ಪ
ಹರತಾಳು ಹಾಲಪ್ಪ   

ಬೆಂಗಳೂರು: ‘ನನ್ನನ್ನು ರಾಜಕೀಯವಾಗಿ ಮುಗಿಸಬೇಕೆಂಬ ಷಡ್ಯಂತ್ರದಿಂದ ನನ್ನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಲಾಗಿದೆ’ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಜನಪ್ರತಿನಿಧಿಗಳ ಕೋರ್ಟ್‌ಗೆ ತಿಳಿಸಿದರು.

ಕಾಂಗ್ರೆಸ್‌ ನಾಯಕಿ ಉಮಾಶ್ರೀ ವಿರುದ್ಧ ಹಾಲಪ್ಪ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ ಶನಿವಾರ ನಡೆಸಿತು.

ಫಿರ್ಯಾದುದಾರ ಹಾಲಪ್ಪ ಅವರ ಮುಖ್ಯ ವಿಚಾರಣೆಯನ್ನು ಅವರ ಪರ ವಕೀಲ ರಮೇಶ್ಚಂದ್ರ ನಡೆಸಿದರು.

ADVERTISEMENT

ವಿಚಾರಣೆ ವೇಳೆ ಹಾಲಪ್ಪ, ‘ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ 23 ತಿಂಗಳು ಸಚಿವನಾಗಿದ್ದ ನನ್ನನ್ನು ರಾಜಕೀಯವಾಗಿ ಮುಗಿಸುವ ಏಕೈಕ ಉದ್ದೇಶದಿಂದ ಇಂತಹ ಆರೋಪ ಹೊರಿಸಲಾಗಿದೆ. ಈ ಕುರಿತ ಸುದ್ದಿ 2014ರ ಫೆಬ್ರುವರಿ13ರಂದು ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ’ ಎಂದರು. ಈ ಹೇಳಿಕೆಯ ಅನುಸಾರ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ಪತ್ರಿಕೆಯ ವರದಿಯನ್ನು ಸಾಕ್ಷ್ಯ ಎಂದು ನಮೂದು ಮಾಡಲು ಆದೇಶಿಸಿದರು.

ಇದಕ್ಕೆ ಉಮಾಶ್ರೀ ಪರ ವಕೀಲ ಸಿ.ಎಚ್‌.ಹನುಮಂತರಾಯ ಆಕ್ಷೇಪ ವ್ಯಕ್ತಪಡಿಸಿದರು. ‘ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ನ್ಯಾಯಾಲಯ ನಿಶಾನೆ (ಸಾಕ್ಷ್ಯ) ಎಂದು ಪರಿಗಣಿಸುವ ಮುನ್ನ ವರದಿಗಾರ, ಪ್ರಕಾಶಕ ಹಾಗೂ ಮುದ್ರಕರಿಂದ ಕೋರ್ಟ್‌ನಲ್ಲಿ ಸಾಕ್ಷ್ಯ ಕೊಡಿಸುತ್ತೇನೆ ಎಂದು ಫಿರ್ಯಾದುದಾರರು ಮುಚ್ಚಳಿಕೆ ಬರೆದುಕೊಡಬೇಕು. ಹಾಗಿದ್ದರೆ ಮಾತ್ರ ಇದನ್ನು ಸಾಕ್ಷ್ಯ ಎಂದು ಪರಿಗಣಿಸ
ಬಹುದು’ ಎಂದರು.

ತಮ್ಮ ವಾದಕ್ಕೆ ಸಮರ್ಥನೆ ನೀಡುವ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ನ್ಯಾಯಾಧೀಶರಿಗೆ ನೀಡಲು ಮುಂದಾದರು. ಆದರೆ, ನ್ಯಾಯಾಧೀಶರು ಇದನ್ನು ಒಪ್ಪಲಿಲ್ಲ. ‘ಇದರಲ್ಲಿ ಈ ಕೇಸ್‌ ಲಾ ಅಪ್ಲೈ ಮಾಡಲು ಆಗೋದಿಲ್ಲ. ನೀವು ಹೇಳುತ್ತಿರುವ ವಿಚಾರ ಹೊಸದು’ ಎಂದರು.

ಇದಕ್ಕೆ ಹನುಮಂತರಾಯ, ‘ಹೊಸದು ಯಾಕಿರಬಾರದು. ನನಗೂ ಎಷ್ಟೋ ವಿಚಾರ ಹೊಸತಾಗಿರುತ್ತವೆ. ತಮಗೂ ಎಷ್ಟೋ ವಿಚಾರಗಳು ಹೊಸದಿರುತ್ತವೆ. ಹಳೆಯದನ್ನು ನಂಬಿಕೆಗೆ ಅರ್ಹ ಎಂದು ಪರಿಗಣಿಸುವುದು, ಹೊಸದನ್ನು ಹೇಳಿದಾಗ ಅನುಮಾನಿಸುವುದು ತಪ್ಪು. ಹೊಸ ವಿಚಾರಗಳಲ್ಲೂ ಒಪ್ಪುವ ಅಂಶ ಇರುತ್ತದೆ ಎಂಬುದನ್ನು ಯಾಕೆ ಪರಿಗಣಿಸಬಾರದು’ ಎಂದು ಪ್ರಶ್ನಿಸಿದರು.

ಈ ಆಕ್ಷೇಪವನ್ನು ದಾಖಲಿಸಿಕೊಂಡ ನ್ಯಾಯಾಧೀಶರು ಮುಖ್ಯ ವಿಚಾರಣೆ ಮುಕ್ತಾಯಗೊಳಿಸಿ, ಪಾಟಿ ಸವಾಲಿಗೆ ಮುಂದಿನ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿದರು.

2014ರ ಫೆಬ್ರುವರಿ 16ರಂದು ಕಾಂಗ್ರೆಸ್‌ ನಾಯಕಿ ಉಮಾಶ್ರೀ, ತುಮಕೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ನ ಮಹಿಳಾ ಸಮಾವೇಶದಲ್ಲಿ ಹಾಲಪ್ಪ ಅವರನ್ನು, ‘ಸ್ನೇಹಿತನ ಹೆಂಡತಿ ಮೇಲೆ ಅತ್ಯಾಚಾರ ಮಾಡುವ ರೇಪಿಸ್ಟ್‌’ ಎಂದು ಟೀಕಿಸಿದ್ದರು. ಇದರ ವಿರುದ್ಧ ಹಾಲಪ್ಪ ಈ ಮೊಕದ್ದಮೆ ದಾಖಲಿಸಿದ್ದಾರೆ. ವಿಚಾರಣೆ ವೇಳೆ ಉಮಾಶ್ರೀ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.