ADVERTISEMENT

"ಟಿಪ್ಪು ನಿಜ ಕನಸುಗಳು" ಕೃತಿಯ ಮಾರಾಟಕ್ಕೆ ಕೋರ್ಟ್ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 9:42 IST
Last Updated 23 ನವೆಂಬರ್ 2022, 9:42 IST
   

ಬೆಂಗಳೂರು: "ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ವಿರಚಿತ, "ಟಿಪ್ಪು ನಿಜ ಕನಸುಗಳು" ಕೃತಿಯ ಮಾರಾಟಕ್ಕೆ ಮತ್ತು ಈ ಕೃತಿ ಆಧರಿಸಿದ ನಾಟಕ ಪ್ರದರ್ಶಿಸದಂತೆ ಶಾಶ್ವತ ತಡೆ ನೀಡಬೇಕು" ಎಂದು ಕೋರಲಾದ ಮನವಿಗೆ ಸಂಬಂಧಿಸಿದಂತೆ ಕೃತಿಯ ಮಾರಾಟಕ್ಕೆ ನಗರದ 14ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ.

ಈ ಸಂಬಂಧ ಜಿಲ್ಲಾ ವಕ್ಫ್ ಬೋರ್ಡ್ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಬೆಂಗಳೂರಿನ ನಿವಾಸಿ ಬಿ.ಎಸ್. ರಫೀವುಲ್ಲಾ ದಾಖಲಿಸಿರುವ ಅಸಲು ದಾವೆಯನ್ನು ನ್ಯಾಯಾಧೀಶ ಜೆ.ಆರ್. ಮೆಂಡೋನ್ಕಾ ಅವರು ಪ್ರತಿವಾದಿಗಳ ಗೈರು ಹಾಜರಿಯಲ್ಲಿ ಏಕಪಕ್ಷೀಯ ಮನವಿ ಆಲಿಸಿದ ಬಳಿಕ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶಿಸಿದ್ದಾರೆ.

ಮುಂದಿನ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ನಿಗದಿಪಡಿಸಲಾಗಿದ್ದು, ಅಲ್ಲೀವರೆಗೂ ಈ ನಾಟಕ ಕೃತಿಯನ್ನು ಎಲ್ಲೂ ಮಾರಾಟ ಮಾಡಬಾರದು. ಆನ್ ಲೈನ್ ತಾಣಗಳಲ್ಲಿಯೂ ವಿತರಣೆ ಅಥವಾ ಮಾರಾಟ ಮಾಡಬಾರದು ಎಂದು ಆದೇಶಿಸಿರುವ ನ್ಯಾಯಾಧೀಶರು, ಪ್ರತಿವಾದಿಗಳಾದ ಕೃತಿ ಕರ್ತ ಅಡ್ಡಂಡ ಸಿ.ಕಾರ್ಯಪ್ಪ, ಪ್ರಕಾಶಕರಾದ ಅಯೋಧ್ಯಾ ಪ್ರಕಾಶನ ಹಾಗೂ ಮುದ್ರಣಕಾರರಾದ ರಾಷ್ಟ್ರೋತ್ಥಾನ ಮುದ್ರಣಾಲಯಕ್ಕೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿದ್ದಾರೆ.

ADVERTISEMENT

ಅಂತೆಯೇ, "ದಾವೆದಾರರು ಈ ಆದೇಶದ ದುರ್ಬಳಕೆ ಮಾಡಿಕೊಳ್ಳಬಾರದು" ಎಂದು ಎಚ್ಚರಿಸಲಾಗಿದ್ದು, "ಮುದ್ರಣಕಾರರು ಮುಂದೊದಗಬಹುದಾದ ಯಾವುದೇ ಪರಿಣಾಮಗಳನ್ನು ಎದುರಿಸುವ ಸ್ವಯಂ ಜವಾಬ್ದಾರಿಯ ಮೇಲೆ ಪುಸ್ತಕವನ್ನು ಮುದ್ರಿಸಬಹುದು ಹಾಗೂ ಸಂಗ್ರಹಿಸಿ ಇಟ್ಟುಕೊಳ್ಳಬಹುದು" ಎಂದೂ ಸ್ವಾತಂತ್ರ್ಯ ನೀಡಿ ಆದೇಶಿಸಲಾಗಿದೆ.

ದಾವೆಯಲ್ಲಿ ಏನಿದೆ?:

*ಈ ಪುಸ್ತಕದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ತಪ್ಪು ಮಾಹಿತಿಗಳನ್ನು ಹರಡಲಾಗಿದೆ.

* ಕೃತಿಯಲ್ಲಿ ಉಲ್ಲೇಖಿಸಿರುವ ಅಂಶಗಳಿಗೆ ಇತಿಹಾಸದ ಸಮರ್ಥನೆ ಅಥವಾ ಆಧಾರಗಳಿಲ್ಲ.

* ಇತಿಹಾಸದ ತಿಳಿವಳಿಕೆ ಇಲ್ಲದೆ ಈ ಕೃತಿಯನ್ನು ರಚಿಸಲಾಗಿದೆ.

* ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಆಜಾನ್ ಅನ್ನು ಚಿತ್ರಿಸಲಾಗಿದೆ.

* ಮುಸ್ಲಿಮರನ್ನು ತುರುಕರು ಎಂದು ಅವಹೇಳನಕಾರಿಯಾಗಿ ಕರೆಯಲಾಗಿದೆ.

* ಈ ಕೃತಿಯ ಸತ್ಯಾಂಶಗಳನ್ನು ಆಧರಿಸಿ ರಚಿಸಲಾಗಿದೆ ಎಂದು ಮುನ್ನಡಿಯಲ್ಲಿ ಕಾಣಿಸಲಾಗಿದೆ.

* ಶಾಲೆಗಳಲ್ಲಿ ಕಲಿಸುವ ಪಠ್ಯಪುಸ್ತಕಗಳಲ್ಲಿ ಟಿಪ್ಪು ಬಗ್ಗೆ ವಿವರಿಸುವ ಅಂಶಗಳು ಸುಳ್ಳು ಎಂದು ಪ್ರತಿಪಾದಿಸಲಾಗಿದೆ.

* ಟಿಪ್ಪು ಸುಲ್ತಾನನ ವ್ಯಕ್ತಿತ್ವದ ನೈಜ ಅನಾವರಣ ಈ ಕೃತಿಯಲ್ಲಿದೆ ಎಂದು ಹೇಳಲಾಗಿದೆ.

* ಕೃತಿಕಾರರು ಮುಸ್ಲಿಂ‌ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.

* ಕೃತಿ ಸಾರ್ವಜನಿಕ ಶಾಂತಿಯನ್ನು ಕದಡಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.