ADVERTISEMENT

ಕೋವಿಡ್-19 | ಸಾಮರ್ಥ್ಯವಿದ್ದರೂ ಪರೀಕ್ಷೆಯಿಲ್ಲ

ಸೋಂಕು ಲಕ್ಷಣಗಳು ಗೋಚರಿಸುವ ವ್ಯಕ್ತಿಗಳಿಗೆ ಮಾತ್ರವೇ ತಪಾಸಣೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 21:16 IST
Last Updated 11 ಜೂನ್ 2020, 21:16 IST
   
""

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಅವಧಿಯಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಇಳಿಕೆ ಮಾಡಲಾಗಿದೆ. ಸೋಂಕು ಲಕ್ಷಣಗಳು ಬಹಿರಂಗವಾಗಿ ಗೋಚರಿಸಿದ ವ್ಯಕ್ತಿಗಳಿಗೆ ಮಾತ್ರ ಪರೀಕ್ಷೆ ಮಾಡುತ್ತಿರುವ ಪರಿಣಾಮ ಪ್ರಕರಣಗಳ ಸಂಖ್ಯೆಗಳೂ ಇಳಿಮುಖವಾಗಿವೆ.

ರಾಜ್ಯದಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾದ ಬಳಿಕ ರೋಗಿಯ ನೇರ ಹಾಗೂ ಪರೋಕ್ಷಿತ ಸಂಪರ್ಕಿತರು, ವಿದೇಶಗಳಿಂದ ಬಂದವರು, ಅನ್ಯ ರಾಜ್ಯಗಳಿಂದ ವಾಪಸ್ ಆದವರು ಹಾಗೂ ಸೋಂಕು ಶಂಕಿತರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿತ್ತು. ಕ್ವಾರಂಟೈನ್ ಅವಧಿಯಲ್ಲಿ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಾಗ ಮಾತ್ರ ಅವರನ್ನು ಮನೆಗೆ ಕಳುಹಿಸಲಾಗುತ್ತಿತ್ತು. ಆದರೆ, ಈಗ ಪರೀಕ್ಷೆಯ ನಿಯಮಗಳನ್ನು ಸಡಿಲಿಸಿರುವ ಆರೋಗ್ಯ ಇಲಾಖೆ, ಕೇವಲ ಸೋಂಕು ಲಕ್ಷಣಗಳು ಕಾಣಿಸಿಕೊಂಡವರಿಗೆ ಮಾತ್ರ ಪರೀಕ್ಷೆ ನಡೆಸುತ್ತಿದೆ.

ದೇಶದಲ್ಲಿಯೇ ಅಧಿಕ ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರದಿಂದ ಬಂದವರಿಗೂಕೋವಿಡ್ಪರೀಕ್ಷೆಯ ವಿನಾಯಿತಿ ನೀಡಲಾಗಿದ್ದು, ಕ್ವಾರಂಟೈನ್‌ ಅವಧಿಯಲ್ಲಿ ಸೋಂಕು ಲಕ್ಷಣಗಳು ಕಾಣಿಸಿಕೊಂಡಲ್ಲಿ ಮಾತ್ರ ಪರೀಕ್ಷೆ ಮಾಡಲಾಗುತ್ತದೆ.

ADVERTISEMENT

ಗೋಚರಿಸದ ಲಕ್ಷಣ:ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳೇ ಗೋಚರಿಸುತ್ತಿಲ್ಲ. ತೀವ್ರ ಉಸಿರಾಟದ ಸಮಸ್ಯೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಸಂಬಂಧ ಆಸ್ಪತ್ರೆಗಳಿಗೆ ತೆರಳಿ, ಪರೀಕ್ಷೆಗೆ ಒಳಗಾದಾಗ ಮಾತ್ರ ಕೋವಿಡ್ ಪೀಡಿತರಾಗಿರುವುದು ಬೆಳಕಿಗೆ ಬರುತ್ತಿದೆ. ಅದೇ ರೀತಿ, ಅನ್ಯ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್‌ಗೆ ಒಳಪಡಿಸಿ, ಪರೀಕ್ಷಿಸಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಿದ್ದವು. ಒಂದೇ ದಿನ 15 ಸಾವಿರಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಿದಾಗ 500ಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿದ್ದವು.

‘ಸೋಂಕು ಶಂಕಿತರ ವರದಿ ವಿಳಂಬವಾಗುತ್ತಿದೆ ಎಂಬ ಕಾರಣಕ್ಕೆ ಅನ್ಯ ರಾಜ್ಯದಿಂದ ಬಂದವರನ್ನು ಪರೀಕ್ಷೆಗೆ ಒಳಪಡಿಸುತ್ತಿಲ್ಲ. ಮಹಾರಾಷ್ಟ್ರದಿಂದ ಬರುವವರು ಕೋವಿಡ್ ಪರೀಕ್ಷೆಯ ವರದಿಯನ್ನು ತರಬೇಕು. ಹಾಗಾಗಿ ಅವರಿಗೆ ಕ್ವಾರಂಟೈನ್ ಅವಧಿಯಲ್ಲಿ ಲಕ್ಷಣಗಳು ಗೋಚರಿಸಿದಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಸ್ವಾಮೀಜಿ, ಗರ್ಭಿಣಿಗೂ ಸೋಂಕು
ಶಿವಮೊಗ್ಗ: ಕಲ್ಲುಗಂಗೂರಿನ ರಾಮಕೃಷ್ಣಾಶ್ರಮದ 52 ವರ್ಷದ ಸ್ವಾಮೀಜಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಭಕ್ತವಲಯದಲ್ಲಿ ಆತಂಕ ಸೃಷ್ಟಿಸಿದೆ.

ಉಸಿರಾಟದ ತೊಂದರೆಗಾಗಿ ಚಿಕಿತ್ಸೆಗೆ ಬಂದಾಗ ಅವರಿಗೆ ಸೋಂಕು ಇರುವುದು ಖಚಿತವಾಗಿದೆ. ಎಲ್ಲೂ ಪ್ರಯಾಣ ಮಾಡದ ಅವರಿಗೆ ಸೋಂಕು ತಗುಲಿರುವುದು ನಿತ್ಯವೂ ಮಠಕ್ಕೆ ಬರುತ್ತಿದ್ದ ಭಕ್ತರಲ್ಲಿ ಆತಂಕ ಮೂಡಿಸಿದೆ. ಬೇರೆ ರಾಜ್ಯದಿಂದ ಬಂದಿದ್ದ ಭಕ್ತರಿಂದ ಸೋಂಕು ತಗುಲಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಗರ್ಭಿಣಿಗೆ ಸೋಂಕು: ಹೆರಿಗೆಗೆ ಒಂದು ವಾರ ಇರುವಾಗ ಭದ್ರಾವತಿಯ ಗರ್ಭಿಣಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. 25 ವರ್ಷದ ಈ ಮಹಿಳೆಯನ್ನು ಪೋಷಕರು ವಾರದ ಹಿಂದೆ ಬೆಂಗಳೂರಿನಿಂದ ಕರೆದುಕೊಂಡು ಬಂದಿದ್ದರು. ಮುಂದಿನ ವಾರ ವೈದ್ಯರು ಹೆರಿಗೆಗೆ ಸಮಯ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.