ADVERTISEMENT

ಕೋವಿಡ್: 9.14 ಲಕ್ಷ ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 17:37 IST
Last Updated 21 ಜನವರಿ 2021, 17:37 IST

ಬೆಂಗಳೂರು: ಕೋವಿಡ್ ಪೀಡಿತರಲ್ಲಿ ಗುರುವಾರ 815 ಮಂದಿ ಗುಣಮುಖರಾಗಿದ್ದಾರೆ. ಇದರಿಂದಾಗಿ ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 9.14 ಲಕ್ಷಕ್ಕೆ ತಲುಪಿದೆ.

ರಾಜ್ಯದಲ್ಲಿ ಹೊಸದಾಗಿ 674 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಸೋಂಕಿಗೀಡಾದವರ ಒಟ್ಟು ಸಂಖ್ಯೆ 9.34 ಲಕ್ಷ ದಾಟಿದೆ. ಸೋಂಕಿತರಲ್ಲಿ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,187ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,554ಕ್ಕೆ ಇಳಿಕೆಯಾಗಿದ್ದು, ಸೋಂಕಿತರಲ್ಲಿ ಸದ್ಯ 171 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ.

ಒಂದೇ ದಿನ 88 ಸಾವಿರ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈ ತಿಂಗಳು 21 ದಿನಗಳಲ್ಲಿ 21.10 ಲಕ್ಷ ಮಂದಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈವರೆಗೆ ರಾಜ್ಯದಲ್ಲಿ 1.63 ಕೋಟಿ ಮಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ಕಳೆದ 14 ದಿನಗಳ ಅವಧಿಯಲ್ಲಿ 49 ಸಾವಿರ ನೇರ ಹಾಗೂ 56 ಸಾವಿರ ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ. ಕಳೆದ ಡಿ.9 ರ ಬಳಿಕ 7 ಸಾವಿರ ಮಂದಿ ಬ್ರಿಟನ್‌ನಿಂದ ಇಲ್ಲಿಗೆ ಬಂದಿದ್ದಾರೆ. ಅವರಲ್ಲಿ 50 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಅವರ ಸಂಪರ್ಕ ಹೊಂದಿದ್ದವರಲ್ಲಿ 26 ಮಂದಿ ಸೋಂಕಿತರಾಗಿದ್ದಾರೆ. ಈವರೆಗೆ 14 ಮಂದಿಯಲ್ಲಿ ರೂಪಾಂತರ ವೈರಾಣು ಕಾಣಿಸಿಕೊಂಡಿದೆ.

ADVERTISEMENT

ಬೆಂಗಳೂರಿನಲ್ಲಿ 371 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.96 ಲಕ್ಷಕ್ಕೆ ತಲುಪಿದೆ. ಮೈಸೂರಿನಲ್ಲಿ ಮತ್ತೆ 35 ಪ್ರಕರಣಗಳು ವರದಿಯಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ 53,132ಕ್ಕೆ ಏರಿಕೆಯಾಗಿದೆ. ಕಲಬುರ್ಗಿಯಲ್ಲಿ 40, ದಕ್ಷಿಣ ಕನ್ನಡದಲ್ಲಿ 39, ತುಮಕೂರಿನಲ್ಲಿ 26, ಚಿಕ್ಕಬಳ್ಳಾಪುರದಲ್ಲಿ 18 ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ಹಾಗೂ ಧಾರವಾಡದಲ್ಲಿ ತಲಾ ಒಂದು ಮರಣ ಪ್ರಕರಣ ಹೊಸದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.