ADVERTISEMENT

ಆಸ್ಪತ್ರೆಗೆ ದಾಖಲಿಸಲು ವರದಿಗೆ ಕಾಯಬೇಕಿಲ್ಲ: ಆರೋಗ್ಯ ಇಲಾಖೆ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 21:29 IST
Last Updated 14 ಜುಲೈ 2020, 21:29 IST

ಬೆಂಗಳೂರು: ಕೊರೊನಾ ಸೋಂಕು ಶಂಕಿತ ವ್ಯಕ್ತಿಯ ಕೋವಿಡ್ ಪರೀಕ್ಷಾ ವರದಿ ಬರದಿದ್ದರೂ ನಿಗದಿತ ಆಸ್ಪತ್ರೆಗೆ ಕೂಡಲೇ ದಾಖಲಿಸಬೇಕು ಎಂದು ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಅವರು 108 ಆರೋಗ್ಯ ಕವಚ ಆಂಬುಲೆನ್ಸ್ ಸೇವೆಯ ನೋಡಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ. ಉಸಿರಾಟ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ಕೋವಿಡ್ ಶಂಕಿತರು ಎಂದು ಪರಿಗಣಿಸಿ, ಆಸ್ಪತ್ರೆಗೆ ದಾಖಲಿಸಬೇಕು. ಪರೀಕ್ಷೆಯ ವರದಿ ಬರುವವರೆಗೂ ಐಸೊಲೇಷನ್ ವಾರ್ಡ್‌ನಲ್ಲಿ ಇರಿಸಿ, ಅಗತ್ಯ ಚಿಕಿತ್ಸೆ ನೀಡಬೇಕು.

ಸೋಂಕು ದೃಢಪಟ್ಟಲ್ಲಿ ಕೂಡಲೇ ಕೋವಿಡ್‌ ವಾರ್ಡ್‌ಗೆ ಸ್ಥಳಾಂತರ ಮಾಡಬೇಕು. ಸೋಂಕು ಇಲ್ಲದಿದ್ದರೆ ಅಲ್ಲಿಯೇ ಚಿಕಿತ್ಸೆ ಮುಂದುವರಿಸಬೇಕು ಎಂದು ತಿಳಿಸಿದ್ದಾರೆ.

ADVERTISEMENT

ಇಂತಹ ಪ್ರಕರಣಗಳಲ್ಲಿ ಬಿಬಿಎಂಪಿ ಅಧಿಕಾರಿಗಳ ಪತ್ರ ಅಗತ್ಯ ಇರುವುದಿಲ್ಲ. ರೋಗಿಗಳ ಸಂಖ್ಯೆ ನೀಡದಿದ್ದರೂ ಮುಂದಿನ ಕ್ರಮಕೈಗೊಳ್ಳಬೇಕು.ರೋಗಿಗಳನ್ನು ದಾಖಲಿಸಿಕೊಳ್ಳದ ಆಸ್ಪತ್ರೆಗಳ ಮೇಲೆ ಕೆಪಿಎಂಇ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಲಾಗುವುದು.ಕೋವಿಡ್‌ ಪರೀಕ್ಷೆಯ ವರದಿ ಬರುವವರೆಗೂ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಚಿಕಿತ್ಸೆ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.

108ಕ್ಕೆ ಸಂಪರ್ಕಿಸಿದಲ್ಲಿ ಸ್ಥಳಾಂತರ
*
108ಕ್ಕೆ ಕರೆ ಬಂದಲ್ಲಿ ಸೋಂಕಿತರಾಗಿದ್ದಾರೆಯೇ ಅಥವಾ ಸೋಂಕು ಲಕ್ಷಣಗಳು ಕಾಣಿಸಿಕೊಂಡಿದೆಯೇ ಎಂದು ವಿಚಾರಿಸಬೇಕು
*ಸೋಂಕಿನ ಪ್ರಾರಂಭಿಕ ಲಕ್ಷಣಗಳು ಅಥವಾ ಲಕ್ಷಣರಹಿತರಾಗಿದ್ದಲ್ಲಿ ಹತ್ತಿರದ ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಿಸಬೇಕು‌
*ಬಿಬಿಎಂಪಿಯಿಂದ ಯಾವುದೇ ಪ್ರಮಾಣಪತ್ರಕ್ಕಾಗಿ ಕಾಯಬೇಕಾಗಿಲ್ಲ
*ವ್ಯಕ್ತಿಯ ವಿಳಾಸ ಹಾಗೂ ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸಿಕೊಳ್ಳಬೇಕು
*ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾದ ವ್ಯಕ್ತಿಯನ್ನು ನಿಗದಿತ ಆಸ್ಪತ್ರೆಗೆ ಸ್ಥಳಾಂತರ ಮಾಡುವಾಗ ಕೂಡ 108 ಆಂಬುಲೆನ್ಸ್ ಸೇವೆಯನ್ನೇ ಪಡೆಯಬೇಕಾಗುತ್ತದೆ
*ವ್ಯಕ್ತಿ ನೇರವಾಗಿ ಕೋವಿಡ್ ಆರೈಕೆ ಕೇಂದ್ರಕ್ಕೆ ಬಂದಲ್ಲಿಯೂ ದಾಖಲು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ
*ವ್ಯಕ್ತಿಗೆ ಸಂಬಂಧಿಸಿದ ದಾಖಲಾತಿಯನ್ನು 108 ಆರೋಗ್ಯ ಕವಚವು ಬಿಬಿಎಂಪಿಗೆ ಒದಗಿಸಬೇಕು. ಬಳಿಕ ಬಿಬಿಎಂಪಿ ರೋಗಿಗೆ ನಿಗದಿತ ಸಂಖ್ಯೆ ಒದಗಿಸಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.