ADVERTISEMENT

ಕೊರೊನಾ ‘ಸೇನಾನಿ’ಗಳ ಕುಟುಂಬ ಅನಾಥ

ಭರವಸೆಯಲ್ಲೇ ಉಳಿದ ₹30 ಲಕ್ಷ ವಿಮೆ * ಒಪ್ಪೊತ್ತಿನ ಊಟಕ್ಕೂ ತತ್ವಾರ– ಅವಲಂಬಿತರ ಅಳಲು/ ಪ್ರಜಾವಾಣಿ ವಿಶೇಷ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 19:31 IST
Last Updated 10 ಫೆಬ್ರುವರಿ 2021, 19:31 IST
ಕೊರೋನಾ ವಾರಿಯರ್‌ಗಳಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭ - ಪ್ರಜಾವಾಣಿ ಚಿತ್ರ
ಕೊರೋನಾ ವಾರಿಯರ್‌ಗಳಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭ - ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋವಿಡ್‌ ಆತಂಕ ಕಾರಿಯಾಗಿ ಹರಡುತ್ತಾ ಜನರನ್ನು ಬೆಚ್ಚಿ ಬೀಳಿಸುತ್ತಿದ್ದ ಕಾಲದಲ್ಲಿ ಜೀವವನ್ನೇ ಪಣವಾಗಿಟ್ಟು ಕರ್ತವ್ಯ ನಿರ್ವಹಿಸಿ, ಕೋವಿಡ್‌ನಿಂದ ಮೃತಪಟ್ಟ ಕೊರೊನಾ ಯೋಧರ ಕುಟುಂಬದವರ ಪಾಡು ಶೋಚನೀಯವಾಗಿದೆ.

ಕುಟುಂಬಕ್ಕೆ ಆಸರೆಯಾಗಿದ್ದ ನೌಕರರು ಕೋವಿಡ್ ನಿರ್ವಹಣೆಯಲ್ಲಿ ಭಾಗಿಯಾದ ಕಾರಣಕ್ಕೆ ಮೃತಪಟ್ಟಿದ್ದರಿಂದಾಗಿ, ಅವರನ್ನೇ ನೆಚ್ಚಿಕೊಂಡಿದ್ದ ಕುಟುಂಬಸ್ಥರು ಒಪ್ಪೊತ್ತಿನ ಊಟಕ್ಕೂ ತತ್ವಾರ ಎದುರಿಸುವ ಸ್ಥಿತಿಯಲ್ಲಿದ್ದಾರೆ.

ಕೋವಿಡ್‌ ಯೋಧರಿಗಾಗಿ ಕೇಂದ್ರ ಸರ್ಕಾರ ₹ 50 ಲಕ್ಷ ಮೊತ್ತದ ‘ಪ್ರಧಾನ ಮಂತ್ರಿ ಗರೀಬ್→ಕಲ್ಯಾಣ್ ಪ್ಯಾಕೇಜ್ ವಿಮಾ ಯೋಜನೆ’ ಯನ್ನು 2020ರ ಮಾ.30ರಂದು ಪ್ರಕಟಿಸಿತ್ತು. ಎಲ್ಲ ಆರೋಗ್ಯ ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳಲ್ಲಿ ದೈನಂದಿನ ವೇತನ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸು ವವರು, ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡವರು, ಹೊರಗುತ್ತಿಗೆ ಸಿಬ್ಬಂದಿ, ನಿವೃತ್ತರು ಹಾಗೂ ಸ್ವಯಂ ಸೇವಕರು ಸೇರಿ ಎಲ್ಲ ಸಿಬ್ಬಂದಿ ವಿಮೆಗೆ ಅರ್ಹರು ಎಂದು ಕೇಂದ್ರ ಸರ್ಕಾರ ಹೇಳಿತ್ತು.

ADVERTISEMENT

ವಿಮೆ ಮೊತ್ತವನ್ನು ಕೇಂದ್ರವೇ ಭರಿಸಲಿದೆ ಎಂದು ಭಾವಿಸಲಾಗಿತ್ತು. ಬಳಿಕ, ಪರಿಷ್ಕೃತ ಆದೇಶ ಹೊರಡಿಸಿದ ಕೇಂದ್ರ, ‘ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಕಾರ್ಯಕರ್ತರ ಕುಟುಂಬಗಳಿಗೆ ಮಾತ್ರ ಗರೀಬ್‌ ಕಲ್ಯಾಣ್‌ ವಿಮೆ ಸಿಗಲಿದೆ. ಇತರ ಸಿಬ್ಬಂದಿ ಸತ್ತರೆ, ಸಂತ್ರಸ್ತ ಕುಟುಂಬಗಳಿಗೆ ನೀಡುವ ವಿಮೆಯ ಮೊತ್ತವನ್ನು ರಾಜ್ಯವೇ ಭರಿಸಬೇಕು’ ಎಂದು ಕೈಚೆಲ್ಲಿತ್ತು. ಬಳಿಕ ರಾಜ್ಯ ಸರ್ಕಾರ, ‘ಸಂತ್ರಸ್ತ ಕುಟುಂಬಗಳಿಗೆ ಆಯಾ ಇಲಾಖೆಗಳು ₹ 30 ಲಕ್ಷ ವಿಮೆ ನೀಡಬೇಕು’ ಎಂದು ಸುತ್ತೋಲೆ ಹೊರಡಿಸಿತ್ತು.

ಕೋವಿಡ್‌ನಿಂದ ನೌಕರರು ಮೃತ ಪಟ್ಟು 9 ತಿಂಗಳು ಕಳೆದ ಬಳಿಕವೂ ಸಂತ್ರಸ್ತ ಕುಟುಂಬಗಳಿಗೆ ಇನ್ನೂ ವಿಮೆಯ ಹಣ ತಲುಪಿಲ್ಲ.

‘ರಾಜ್ಯದಾದ್ಯಂತ 108 ಮಂದಿ ಆರೋಗ್ಯ ಕಾರ್ಯಕರ್ತರು ಕೋವಿಡ್‌ ನಿಯಂತ್ರಣ ಸಂದರ್ಭದಲ್ಲಿ ಮೃತ ಪಟ್ಟಿದ್ದು, 60 ಮಂದಿಯ ಅರ್ಜಿಗಳನ್ನು ದಾಖಲೆ ಸಮೇತ ಕೇಂದ್ರಕ್ಕೆ ಕಳುಹಿಸಿದ್ದೇವೆ. 20 ಸಂತ್ರಸ್ತ ಕುಟುಂಬ ಗಳಿಗೆ ವಿಮೆ ಮೊತ್ತ ಕೈಸೇರಿದೆ. ಮೂರು ಕುಟುಂಬಗಳಿಗೆ ಹಣ ಮಂಜೂರಾಗಿದೆ. ಇನ್ನುಳಿದ ಅರ್ಜಿಗಳು ತಿರಸ್ಕೃತಗೊಂಡಿವೆ’ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ‘ಪ್ರಜಾವಾಣಿ’ ಗೆ ತಿಳಿಸಿದರು.

‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 18 ಮಂದಿ ಪೌರಕಾರ್ಮಿಕರೂ ಸೇರಿ 32 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. 13 ಪೌರ ಕಾರ್ಮಿಕರಿಗೂ ವಿಮೆ ಮೊತ್ತ ಪಾವತಿಸಿದ್ದೇವೆ. ಒಬ್ಬರ ವಾರಸುದಾರರು ಪತ್ತೆಯಾಗಿಲ್ಲ’ ಎಂದುಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಬಿ.ಬಿ. ಕಾವೇರಿ ಮಾಹಿತಿ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಂತ್ರಣ ಕರ್ತವ್ಯದಲ್ಲಿ ತೊಡಗಿದ್ದ 18 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಯಾವ ಕುಟುಂಬಕ್ಕೂ ವಿಮೆ ತಲುಪಿಲ್ಲ.

‘ನಾಲ್ವರ ಹೊರತಾಗಿ ಉಳಿದೆಲ್ಲ ಫಲಾನುಭವಿಗಳ ದಾಖಲೆಗಳನ್ನು ಸರ್ಕಾರಕ್ಕೆ ಕಳುಹಿಸಿದ್ದೇವೆ. ಉಳಿದವರ ದಾಖಲಾತಿಗಳನ್ನೂ ಶೀಘ್ರವೇ ಕಳುಹಿಸುತ್ತೇವೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ಜೆ.ಮಂಜುನಾಥ್‌ ಮಾಹಿತಿ ನೀಡಿದರು.

ಪೊಲೀಸ್‌ ಇಲಾಖೆಯ 99 ಸಿಬ್ಬಂದಿ ಕೋವಿಡ್‌ಗೆ ಬಲಿಯಾಗಿದ್ದು, ಎಷ್ಟು ಕುಟುಂಬಗಳಿಗೆ ವಿಮೆ ತಲುಪಿದೆ ಎಂಬ ಮಾಹಿತಿ ಲಭ್ಯವಿಲ್ಲ.

‘ಆಸ್ಪತ್ರೆ ಶುಲ್ಕ ಪಾವತಿಗೂ ಕಷ್ಟಪಟ್ಟೆವು’

‘ನಮ್ಮವರು ಬಿಬಿಎಂಪಿಯಲ್ಲೇ ಇದ್ದರೂ ಚಿಕಿತ್ಸೆಗೆ ಐಸಿಯು ಸಿಗಲಿಲ್ಲ. ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಆಸ್ಪತ್ರೆ ಶುಲ್ಕವನ್ನೂ ನಾವೇ ಕಟ್ಟಿದ್ದೇವೆ. ಏನು ಮಾಡಿದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ’ ಎಂದು ಗದ್ಗದಿತರಾದರು ಗೋವಿಂದರಾಜನಗರದ ಪಾಲಿಕೆ ಕಚೇರಿಯಲ್ಲಿ ವ್ಯವಸ್ಥಾಪಕರಾಗಿದ್ದ ದಿವಂಗತ ಶೈಲೇಶ್‌ ಅವರ ಪತ್ನಿ ಸುಮಾ.

‘ದುಡಿಯುವ ಸ್ಥಿತಿಯಲ್ಲಿ ನಾನಿಲ್ಲ. ಒಬ್ಬನೇ ಮಗ ಪದವಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಕೋವಿಡ್‌ ನೆಪ ಹೇಳಿ ಅವನನ್ನೂ ಕೆಲಸದಿಂದ ತೆಗೆದಿದ್ದಾರೆ. ಕುಟುಂಬ ನಿರ್ವಹಣೆಯೇ ಕಷ್ಟವಾಗಿದೆ’ ಎಂದು ಅವರು ಪರಿಸ್ಥಿತಿ ವಿವರಿಸಿದರು.

‘ಊಟಕ್ಕೂ ಅನ್ಯರ ಮೇಲೆ ಅವಲಂಬನೆ’

‘ನಮ್ಮ ಕುಟುಂಬಕ್ಕೆ ಆಸರೆಯಾಗಿದ್ದ ಅಪ್ಪನನ್ನು ಕಳೆದುಕೊಂಡ ಬಳಿಕ ಒಪ್ಪೊತ್ತಿನ ಊಟಕ್ಕೂ ಸಮಸ್ಯೆಯಾಗಿದೆ. ಕೇರಳದಲ್ಲಿ ಚಹಾ ತೋಟದಲ್ಲಿ ದುಡಿಯವ ದೊಡ್ಡಮ್ಮ ಪಡಿತರ ಖರೀದಿಗೆ ನೆರವಾಗುತ್ತಿದ್ದಾರೆ’ ಎಂದು ಬಿಬಿಎಂಪಿಯ ಕಂದಾಯ ಪರಿವೀಕ್ಷಕರಾಗಿದ್ದ ದಿವಂಗತ ರವಿ ಅವರ ಮಗಳು ಶೆರಿನಾ ಅಳಲು ತೋಡಿಕೊಂಡರು.

ರವಿ ಅವರ ಕುಟುಂಬ ಶ್ರೀರಾಮಪುರದಲ್ಲಿ ಬಾಡಿಗೆ ಮನೆಯಲ್ಲಿದೆ. ಪತ್ನಿ ಜಾನ್ಸಿ ಗೃಹಿಣಿ. ಮಗಳು ಶೆರಿನಾ ಇತ್ತೀಚೆಗಷ್ಟೇ ಪದವಿ ಮುಗಿಸಿದ್ದು, ಕೆಲಸವಿಲ್ಲದೇ ಮನೆಯಲ್ಲಿದ್ದಾರೆ. ಮಗ ಜಾನ್ಸನ್‌ ಪಿ.ಯು. ವಿದ್ಯಾರ್ಥಿ.

‘ಕಿಂಚಿತ್‌ ವರಮಾನವೂ ಇಲ್ಲ’

‘ನನ್ನ ಅಕ್ಕನ (ಸ್ನೇಹಾ) ಎಂಬಿಬಿಎಸ್‌ ಮುಗಿದಿದ್ದು ಇಂಟರ್ನ್‌ಶಿಪ್‌ ಇನ್ನಷ್ಟೇ ಮುಗಿಸಬೇಕಾಗಿದೆ. ಇದಕ್ಕೆ ₹ 2ಲಕ್ಷ ಕಟ್ಟಿ ಎಂದು ಆಸ್ಪತ್ರೆಯವರು ಹೇಳುತ್ತಿದ್ದಾರೆ. ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಮುಂದುವರಿಸಿರುವ ನನಗೂ ಕೆಲಸವಿಲ್ಲ. ಅಮ್ಮ ಗೃಹಿಣಿ. ಕುಟುಂಬಕ್ಕೆ ಕಿಂಚಿತ್‌ ವರಮಾನವು ಇಲ್ಲದ ಸ್ಥಿತಿ ಎದುರಾಗಿದೆ. ತಿಂಗಳಿನಿಂದೀಚೆಗೆ ಪಿಂಚಣಿ ಬರುತ್ತಿದೆಯಾದರೂ ಅದು ಯಾವುದಕ್ಕೂ ಸಾಲದು’ ಎನ್ನುತ್ತಾರೆ ಬಿಬಿಎಂಪಿಯ ಮೌಲ್ಯಮಾಪಕ ದಿವಂಗತ ನಟರಾಜ್‌ ಅವರ ಪುತ್ರ ಕಪಿಲನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.