ADVERTISEMENT

Covid-19 Karnataka Update | 823 ಮಂದಿ ತೀವ್ರ ನಿಗಾ ಘಟಕದಲ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2020, 22:29 IST
Last Updated 25 ಸೆಪ್ಟೆಂಬರ್ 2020, 22:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ನಾಲ್ಕು ದಿನಗಳಿಂದ ಕೋವಿಡ್ ಮರಣಗಳ ಸಂಖ್ಯೆ ಇಳಿಕೆ ಕಂಡಿದ್ದರೂ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಅಷ್ಟಾಗಿ ವ್ಯತ್ಯಾಸವಾಗಿಲ್ಲ. ಸದ್ಯ 823 ಮಂದಿ ಕೊರೊನಾ ಸೋಂಕಿತರು ಐಸಿಯುವಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಇಳಿಕೆ ಕಂಡಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತೆ 8 ಸಾವಿರದ ಗಡಿ ದಾಟಿದೆ. 24 ಗಂಟೆಗಳ ಅವಧಿಯಲ್ಲಿ 8,655 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5.57 ಲಕ್ಷಕ್ಕೆ ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ 59 ಸಾವಿರ ಕೋವಿಡ್ ಪರೀಕ್ಷೆ ಗಳನ್ನು ನಡೆಸಲಾಗಿದೆ. ಈವರೆಗೆ 45.18 ಲಕ್ಷ ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಕೊರೊನಾ ಸೋಂಕಿತರಲ್ಲಿ ಮತ್ತೆ 86 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 8,417ಕ್ಕೆ ಏರಿಕೆಯಾಗಿದೆ.

ಕೋವಿಡ್ ಪೀಡಿತರಲ್ಲಿ ಮತ್ತೆ 5,644 ಮಂದಿಗೆ ಕಾಯಿಲೆ ವಾಸಿಯಾ ಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 4.50 ಲಕ್ಷಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ ಲಕ್ಷದತ್ತ ದಾಪುಗಾಲು ಹಾಕಿದ್ದು, 98 ಸಾವಿರ ಸೋಂಕಿತರು ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರಗಳು ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿಸದ್ಯ 4.75 ಲಕ್ಷ ಮಂದಿ ಮನೆ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ಸತತ ಎರಡನೇ ದಿನ ಕೂಡ ಪ್ರಕರಣಗಳ ಸಂಖ್ಯೆ 4 ಸಾವಿರದ ಗಡಿ ದಾಟಿದೆ. ಹೊಸದಾಗಿ 4,080 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 2.12 ಲಕ್ಷ ತಲುಪಿದೆ. ಮೈಸೂರಿನಲ್ಲಿ ಮತ್ತೆ 702 ಮಂದಿ ಕೋವಿಡ್‌ ಪೀಡಿತರಾಗಿದ್ದಾರೆ. ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 32 ಸಾವಿರ ದಾಟಿದೆ. ಬಳ್ಳಾರಿ (498), ಬೆಂಗಳೂರು ಗ್ರಾಮಾಂತರ (308), ಧಾರವಾಡ (256), ಕಲಬುರ್ಗಿ (226) ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.