ADVERTISEMENT

ಸೇವಾ ಶುಲ್ಕ ಹೆಚ್ಚಳ; ಲಸಿಕೆ ಇನ್ನಷ್ಟು ದುಬಾರಿ

ಖಾಸಗಿ ಆಸ್ಪತ್ರೆ ಒತ್ತಡಕ್ಕೆ ಮಣಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 27 ಮೇ 2021, 21:40 IST
Last Updated 27 ಮೇ 2021, 21:40 IST

ಬೆಂಗಳೂರು: ಕೋವಿಡ್‌ ಲಸಿಕೆಯ ಸೇವಾ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳ ಮನವಿಗೆ ಮಣಿದ ಸರ್ಕಾರ, ಪ್ರತಿ ಡೋಸ್‌ ಸೇವಾ ಶುಲ್ಕವನ್ನು ₹ 200ಗೆ ಏರಿಕೆ ಮಾಡಿದೆ.

ಸರ್ಕಾರವು ಖಾಸಗಿ ಆಸ್ಪತ್ರೆಗಳಿಗೆ ಪೂರೈಸುವ ಲಸಿಕೆಗೆ ₹ 100 ಸೇವಾ ಶುಲ್ಕ ನಿಗದಿ ಮಾಡಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ವಿತರಿಸುವ ‘ಕೋವಿಶೀಲ್ಡ್’ ಮತ್ತು ‘ಕೋವ್ಯಾಕ್ಸಿನ್‌’ ಲಸಿಕೆಗೆ ₹ 250 ಹಾಗೂ ‘ಸ್ಪುಟ್ನಿಕ್ ವಿ’ ಲಸಿಕೆಗೆ ₹ 300 ಸೇವಾ ಶುಲ್ಕ ನಿಗದಿಮಾಡಬೇಕು ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಸರ್ಕಾರಕ್ಕೆ ಆಗ್ರಹಿಸಿತ್ತು. ‌

ಈ ಸಂಬಂಧ ಅಸೋಸಿಯೇಷನ್ ಅಧ್ಯಕ್ಷ ಡಾ. ಪ್ರಸನ್ನ ಎಚ್‌.ಎಂ. ಅವರು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ಹಾಗೂ ಕೋವಿಡ್ ಕಾರ್ಯಪಡೆಗೆ ಪತ್ರ ಬರೆದಿದ್ದರು.

ADVERTISEMENT

‘ಖಾಸಗಿ ಆಸ್ಪತ್ರೆಗಳು ಪ್ರತಿ ಡೋಸ್ ಲಸಿಕೆಗೆ ₹ 100 ಸೇವಾ ಶುಲ್ಕ ಪಡೆಯಬಹುದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ಇಷ್ಟು ಕಡಿಮೆ ಸೇವಾ ಶುಲ್ಕದಲ್ಲಿ ಲಸಿಕೆ ಒದಗಿಸಿದಲ್ಲಿ ಆಸ್ಪತ್ರೆಗಳ ಮೇಲೆ ಮತ್ತಷ್ಟು ಹೊರೆ ಬೀಳಲಿದೆ. ಹಾಗಾಗಿ, ಈ ದರ ಪರಿಷ್ಕರಿಸಬೇಕು. ಕೋವಿಡ್ ಲಸಿಕೆಯ ದಾಸ್ತಾನು, ರಕ್ಷಣೆ ಮುಂತಾದ ಪ್ರಕ್ರಿಯೆಗೆ ಹೆಚ್ಚಿನ ವೆಚ್ಚ ತಗುಲಲಿದೆ. ಇದರೊಂದಿಗೆ ವೈಯಕ್ತಿಕ ಸುರಕ್ಷಾ ಸಾಧನಗಳ ಬಳಕೆ, ತ್ಯಾಜ್ಯ ನಿರ್ವಹಣೆ, ಲಸಿಕೆ ಸಾಗಣೆ ಸೇರಿದಂತೆ ವಿವಿಧ ಮುನ್ನೆಚ್ಚರಿಕೆ ಕ್ರಮಗಳಿಗೆ ಹಣ ಖರ್ಚಾಗುತ್ತದೆ. ಹಾಗಾಗಿ, ಸೇವಾ ಶುಲ್ಕ ಹೆಚ್ಚಿಸಬೇಕು’ ಎಂದು ಆಗ್ರಹಿಸಿದ್ದರು.

ಖಾಸಗಿ ಆಸ್ಪತ್ರೆಗಳ ಒಕ್ಕೂಟವು ಸೇವಾ ಶುಲ್ಕವನ್ನು ₹ 300ಗೆ ಏರಿಕೆ ಮಾಡುವಂತೆ ಮನವಿ ಮಾಡಿದೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಪ್ರತಿ ಡೋಸ್‌ಗೆ ₹ 200 ನಿಗದಿ ಮಾಡಲಾಗಿದೆ. ಇದಕ್ಕಿಂತ ಹೆಚ್ಚಿನ ಸೇವಾ ಶುಲ್ಕ ‍ಪಡೆದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮಕೈಗೊಳ್ಳಲಾಗುವುದು ಎಂದು ಗುರುವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.