ADVERTISEMENT

ನಾಳೆ ಕೋವಿಡ್‌ ಲಸಿಕೆ ನೀಡುವ ತಾಲೀಮು: ಕರ್ನಾಟಕದಲ್ಲಿ ಎಲ್ಲೆಲ್ಲಿ?

ರಾಜ್ಯದ 5 ಜಿಲ್ಲೆಗಳಲ್ಲಿ ಲಸಿಕೆ ಪೂರ್ವಾಭ್ಯಾಸ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 3:10 IST
Last Updated 1 ಜನವರಿ 2021, 3:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೇಂದ್ರ ಸರ್ಕಾರವು ಹಮ್ಮಿಕೊಂಡಿರುವ ಕೋವಿಡ್ ಲಸಿಕೆಯ ಪೂರ್ವಾಭ್ಯಾಸಕ್ಕೆ (ಡ್ರೈ ರನ್‌) ರಾಜ್ಯದ ಐದು ಜಿಲ್ಲೆಗಳು ಆಯ್ಕೆಯಾಗಿವೆ.

ಕೇಂದ್ರ ಸರ್ಕಾರದ ಆದೇಶದ ಅನುಸಾರ ದೇಶದಾದ್ಯಂತ ಜ.2ರಿಂದ ಪೂರ್ವಾಭ್ಯಾಸ ನಡೆಯಲಿದೆ. ರಾಜ್ಯದ ರಾಜಧಾನಿಯಲ್ಲಿ ಮೂರು ಲಸಿಕಾ ಸತ್ರಗಳಲ್ಲಿ ಪೂರ್ವಾಭ್ಯಾಸವನ್ನು ಹಮ್ಮಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಕ್ಷೇತ್ರೀಯ ಮಟ್ಟದಲ್ಲಿ ಎದುರಿಸುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಪೂರ್ವಾಭ್ಯಾಸಕ್ಕೆ ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರ್ಗಿ ಹಾಗೂ ಶಿವಮೊಗ್ಗವನ್ನು ಆಯ್ಕೆ ಮಾಡಲಾಗಿದೆ.

‘ಕೋವಿಡ್ ಲಸಿಕೆ ವಿತರಣೆಗೆ ರಾಜ್ಯದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಸೇರಿದಂತೆ ಮುಂಚೂಣಿಯಲ್ಲಿರುವ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಪೂರ್ವಾಭ್ಯಾಸವು ಪೋರ್ಟಲ್‌ ನಿರ್ವಹಣೆ ಸೇರಿದಂತೆ ಲಸಿಕೆ ವಿತರಣೆಗೆ ಸಂಬಂಧಿಸಿದ ವಿವಿಧ ಪ್ರಕ್ರಿಯೆಗಳನ್ನು ಪರೀಕ್ಷಿಸಲಿದೆ. ಫಲಾನುಭವಿಗಳ ಮಾಹಿತಿಯನ್ನು ಈ ವೇಳೆ ದಾಖಲಿಸಲಾಗುತ್ತದೆ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

‘ಲಸಿಕಾ ಸತ್ರಗಳಲ್ಲಿ ದಾಖಲಾತಿಗಳ ಪರಿಶೀಲನೆ ಸೇರಿದಂತೆ ವಿವಿಧ ಪ್ರಕ್ರಿಯೆಗಳ ಬಗ್ಗೆ ಕೂಡ ತಿಳಿಸಿಕೊಡಲಾಗುತ್ತದೆ. ಲಸಿಕೆ ವಿತರಣೆ ವೇಳೆ ಉಂಟಾಗಬಹುದಾದ ಸವಾಲುಗಳನ್ನು ಗುರುತಿಸಿ, ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ’ ಎಂದು ಇಲಾಖೆ ಹೇಳಿದೆ.

ರಾಜ್ಯದಲ್ಲಿ ಲಸಿಕೆ ಸಂಗ್ರಹ ಹಾಗೂ ವಿತರಣೆಗೆ ಈಗಾಗಲೇ ಸಿಬ್ಬಂದಿ ಹಾಗೂ ಕೇಂದ್ರಗಳನ್ನು ಗುರುತಿಸಲಾಗಿದೆ. 1,600 ರಿಂದ 1,800 ಜನರಿಗೆ ಲಸಿಕೆಯನ್ನು ಪ್ರಾಯೋಗಿಕವಾಗಿ ಮೊದಲು ನೀಡಲು ಇಲಾಖೆ ನಿರ್ಧರಿಸಿದೆ. 2,780 ಶೀತಲೀಕರಣ ಘಟಕಗಳನ್ನು ರಾಜ್ಯ ಹೊಂದಿದೆ. ಬೆಂಗಳೂರು, ಬೆಳಗಾವಿ, ಚಿತ್ರದುರ್ಗ, ಮೈಸೂರು, ಮಂಗಳೂರು, ಕಲಬುರ್ಗಿ ಮತ್ತು ಬಾಗಲಕೋಟೆಯಲ್ಲಿ ಲಸಿಕಾ ಉಗ್ರಾಣವನ್ನು ಸಿದ್ಧಗೊಳಿಸಲಾಗಿದೆ. 29,451 ಕೇಂದ್ರಗಳನ್ನು ಲಸಿಕೆ ವಿತರಣೆಗೆ ಗುರುತಿಸಲಾಗಿದೆ. ಲಸಿಕೆ ಹಾಕಲು 10 ಸಾವಿರ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.