ADVERTISEMENT

ಕೋವಿಡ್‌–19: ಮಕ್ಕಳಲ್ಲಿ ಕುಗ್ಗಿದ ಹಾಸ್ಯಪ್ರವೃತ್ತಿ, ತಗ್ಗಿದ ಕಲಿಕೆಯ ಆಸಕ್ತಿ

ರಶ್ಮಿ ಬೇಲೂರು
Published 28 ಮೇ 2022, 18:55 IST
Last Updated 28 ಮೇ 2022, 18:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕುಗ್ಗಿದ ಹಾಸ್ಯಪ್ರವೃತ್ತಿ, ಕಲಿಕೆಯತ್ತ ನಿರಾಸಕ್ತಿ, ಹೆಚ್ಚಿದ ಆಕ್ರಮಣಕಾರಿ ವರ್ತನೆ, ಅಶಿಸ್ತು, ಅತಿಯಾದ ಭಾವನಾತ್ಮಕತೆ, ಸುಳ್ಳು ಹೇಳುವುದು, ಅತಿ ಸೂಕ್ಷ್ಮತೆ...

– ಇವು ಕೋವಿಡ್‌ನಿಂದ ಎಳೆಯ ಮಕ್ಕಳಲ್ಲಿ ಆಗಿರುವ ಬದಲಾವಣೆಗಳು. ಮೇ 16ರಿಂದ ಶಾಲಾ ತರಗತಿಗಳು ಆರಂಭವಾದ ಬಳಿಕ ಮಕ್ಕಳ ಜತೆ ಒಡನಾಡಿರುವ ಶಿಕ್ಷಕರು ಎಳೆಯರಲ್ಲಿ ಕೋವಿಡ್‌ ಪರಿಣಾಮಗಳು ತಂದಿರುವ ಈ ಬದಲಾವಣೆಗಳನ್ನು ಗುರುತಿಸಿ, ಪಟ್ಟಿ ಮಾಡಿದ್ದಾರೆ.

ಮಕ್ಕಳ ವರ್ತನೆಯಲ್ಲಿ ಆಗಿರುವ ತೀವ್ರವಾದ ಬದಲಾವಣೆಗಳನ್ನು ಕಂಡಿರುವ ಶಿಕ್ಷಕರು, ಈ ಕುರಿತು ಶಾಲಾ ಆಡಳಿತ ಮಂಡಳಿ ಪ್ರತಿನಿಧಿಗಳು ಮತ್ತು ಪೋಷಕರ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. 13ರಿಂದ 14 ವರ್ಷದ ಮಕ್ಕಳಲ್ಲೂ ಹಾಸ್ಯಪ್ರವೃತ್ತಿ ದೂರವಾಗುತ್ತಿರುವುದು ಶಿಕ್ಷಕರನ್ನು ಚಿಂತೆಗೆ ದೂಡಿದೆ.

ADVERTISEMENT

‘ಏಳನೇ ತರಗತಿಯ ಕೊಠಡಿಯಲ್ಲಿ ಹಾಸ್ಯಚಟಾಕಿ ಹಾರಿಸಿದರೆ ಶೇಕಡ 80ರಷ್ಟು ಮಕ್ಕಳಿಂದ ನಗುವೇ ಬರಲಿಲ್ಲ. ಈ ಬೆಳವಣಿಗೆ ನನಗೆ ಆಘಾತ ಉಂಟುಮಾಡಿದೆ. 11 ವರ್ಷಗಳಿಂದ ಶಿಕ್ಷಕಿಯಾಗಿದ್ದೇನೆ. ಹಿಂದೆ ಯಾವತ್ತೂ ಈ ರೀತಿಯ ಬೆಳವಣಿಗೆಯನ್ನು ನಾನು ಕಂಡಿರಲಿಲ್ಲ’ ಎನ್ನುತ್ತಾರೆ ಬೆಂಗಳೂರು ದಕ್ಷಿಣ ವಿಭಾಗದ ಅನುದಾನರಹಿತ ಶಾಲೆಯೊಂದರ ಶಿಕ್ಷಕಿ ವೀಣಾ ರಾವ್‌.

‘ಮಕ್ಕಳು ತೀರಾ ಭಾವನಾತ್ಮಕವಾಗಿ ವರ್ತಿಸುತ್ತಿದ್ದಾರೆ. ಸೃಜನಶೀಲ ಚಟುವಟಿಕೆಗಳತ್ತಲೂ ಆಸಕ್ತಿ ಇಲ್ಲ. ವಿದ್ಯಾರ್ಥಿಯೊಬ್ಬ ತನ್ನ ಪಾಳಿ ಬಂದಾಗ ಅಳುತ್ತಾ ನಿಂತಿದ್ದನ್ನು ಕಂಡು ಗಾಬರಿಯಾಗಿದ್ದೇನೆ’ ಎನ್ನುತ್ತಾರೆ ಮತ್ತೊಂದು ಶಾಲೆಯ ಶಿಕ್ಷಕರೊಬ್ಬರು.

‘ಮಕ್ಕಳ ವರ್ತನೆಯಲ್ಲಿ ಬದಲಾವಣೆ ಆಗುತ್ತಿರುವ ಕುರಿತು ಚೈಲ್ಡ್‌ಲೈನ್‌ ಸಹಾಯವಾಣಿಗೆ ಹಲವು ಕರೆಗಳು ಬಂದಿದ್ದವು. ಈ ಕಾರಣಕ್ಕಾಗಿಯೇ ಕೋವಿಡ್‌ ನಂತರದ ದಿನಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಆಪ್ತ ಸಮಾಲೋಚನೆ ನಡೆಸುವ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆವು’ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಜಿ. ರಾವ್‌ ಹೇಳಿದರು.

*

ಮಕ್ಕಳ ವರ್ತನೆಗಳಲ್ಲಿ ಆಗಿರುವ ಬದಲಾವಣೆಗಳಿಂದ ಪೋಷಕರು ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ಮಕ್ಕಳನ್ನು ಮರಳಿ ಕಲಿಕೆಯ ದಾರಿಗೆ ತರಲು ಶಿಕ್ಷಕರು ಹರಸಾಹಸ ಪಡುತ್ತಿದ್ದಾರೆ.
–ಡಿ. ಶಶಿಕುಮಾರ್‌, ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.