ADVERTISEMENT

ಕೋವಿಡ್: 4 ದಿನಗಳಲ್ಲಿ 5,487 ಪ್ರಕರಣ

ಒಂದೇ ದಿನ 1587 ಪ್ರಕರಣ: ನಾಲ್ಕು ತಿಂಗಳಿನಲ್ಲಿ ಗರಿಷ್ಠ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 16:36 IST
Last Updated 19 ಮಾರ್ಚ್ 2021, 16:36 IST

ಬೆಂಗಳೂರು: ರಾಜ್ಯದಲ್ಲಿ ಸತತ ನಾಲ್ಕನೇ ದಿನ ಕೂಡ ಹೊಸ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಶುಕ್ರವಾರ 1,587 ಪ್ರಕರಣಗಳು ದೃಢಪಟ್ಟಿವೆ. ಸುಮಾರು ನಾಲ್ಕು ತಿಂಗಳಿನಿಂದೀಚೆಗೆ 24 ಗಂಟೆಗಳ ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ.

ಕಳೆದ ನ.25ರಂದು ರಾಜ್ಯದಲ್ಲಿ 1,630 ಪ್ರಕರಣಗಳು ವರದಿಯಾಗಿದ್ದವು. ಬಳಿಕ ಸೋಂಕಿತರ ಸಂಖ್ಯೆ ಇಳಿಮುಖ ಮಾಡಿತ್ತು. ಈಗ ಕೇವಲ ನಾಲ್ಕು ದಿನಗಳಲ್ಲಿ 5,487 ಮಂದಿ ಸೋಂಕಿತರಾಗಿರುವುದು ಖಚಿತಪಟ್ಟಿದೆ. ಈ ತಿಂಗಳು 19 ದಿನಗಳಲ್ಲಿ 15,564 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ.

ಹೊಸ ಪ್ರಕರಣಗಳು ಏರುಗತಿ ಪಡೆದ ಕಾರಣ ಸಕ್ರಿಯ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗಿದ್ದು, 12,067 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 131 ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ.

ADVERTISEMENT

ಕೋವಿಡ್‌ ಕಾಯಿಲೆಯಿಂದ ಸಾವಿಗೀಡಾದವರ ಸಂಖ್ಯೆ ಕೂಡ ಏರಿಕೆ ಕಂಡಿದ್ದು, ಸೋಂಕಿತರಲ್ಲಿ ಬೆಂಗಳೂರಿನಲ್ಲಿ 6 ಮಂದಿ, ಮೈಸೂರಿನಲ್ಲಿ ಇಬ್ಬರು ಹಾಗೂ ಬೀದರ್‌, ಧಾರವಾಡದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,425ಕ್ಕೆ ತಲುಪಿದೆ. ಕೋವಿಡ್ ಪೀಡಿತರಲ್ಲಿ ಮತ್ತೆ 869 ಮಂದಿ ಚೇತರಿಸಿಕೊಂಡಿದ್ದಾರೆ. ಗುಣಮುಖರಾದವರ ಒಟ್ಟು ಸಂಖ್ಯೆ 9.42 ಲಕ್ಷ ದಾಟಿದೆ. ಒಂದು ದಿನದ ಅವಧಿಯಲ್ಲಿ 91,884 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಈವರೆಗೆ ನಡೆಸಲಾದ ಪರೀಕ್ಷೆಗಳ ಸಂಖ್ಯೆ 2.01 ಕೋಟಿ ಗಡಿ ದಾಟಿದೆ. ‌

ಬೆಂಗಳೂರಿನಲ್ಲಿ 4 ತಿಂಗಳ ಗರಿಷ್ಠ: ಬಾಗಲಕೋಟೆ ಬಿಟ್ಟು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೊಸದಾಗಿ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರುಗತಿ ಪಡೆದುಕೊಂಡಿದೆ. ಹೊಸದಾಗಿ 1,037 ಪ್ರಕರಣಗಳು ವರದಿಯಾಗಿದ್ದು, ನಾಲ್ಕು ತಿಂಗಳ ಬಳಿಕ 24 ಗಂಟೆಗಳ ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ. ಕಳೆದ ನ.22ರಂದು 1,039 ಮಂದಿಗೆ ಸೋಂಕು ದೃಢಪಟ್ಟಿತ್ತು. ಈವರೆಗೆ ಸೋಂಕಿತರಾದವರ ಸಂಖ್ಯೆ 4.15 ಲಕ್ಷ ದಾಟಿದೆ.

ಮೈಸೂರಿನಲ್ಲಿ ಮತ್ತೆ 49 ಪ್ರಕರಣಗಳು ದೃಢಪಟ್ಟಿವೆ. ಅಲ್ಲಿ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 54,682ಕ್ಕೆ ತಲುಪಿದೆ. ಕಲಬುರ್ಗಿಯಲ್ಲಿ 61, ತುಮಕೂರಿನಲ್ಲಿ 50, ದಕ್ಷಿಣ ಕನ್ನಡದಲ್ಲಿ 47, ಬೀದರ್‌ನಲ್ಲಿ 40, ಬೆಳಗಾವಿಯಲ್ಲಿ 37, ಹಾಸನದಲ್ಲಿ 35 ಪ್ರಕರಣಗಳು ಹೊಸದಾಗಿ ವರದಿ‌ಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.