ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಜೊತೆಗೆ ಸೋಂಕಿನ ತೀವ್ರತೆಯಿಂದ ಅಸ್ವಸ್ಥಗೊಳ್ಳುವವರ ಸಂಖ್ಯೆ ಕೂಡ ಏರಿಕೆ ಕಾಣುತ್ತಿದೆ. ಸದ್ಯ 470 ಮಂದಿ ತೀವ್ರ ನಿಗಾ ಘಟಕದಲ್ಲಿದ್ದು, 52 ಮಂದಿ ಸಾವಿಗೀಡಾಗಿರುವುದು ಸೋಮವಾರ ದೃಢಪಟ್ಟಿದೆ.
ಕಳೆದ ವರ್ಷ ಅಕ್ಟೋಬರ್ ಬಳಿಕ ಕೋವಿಡ್‌ಗೆ ಮೃತಪಡುವವರ ಸಂಖ್ಯೆ ಇಳಿಮುಖ ಪಡೆದಿತ್ತು. ಈ ವರ್ಷ ಮಾರ್ಚ್ ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೂ ಮರಣ ಪ್ರಕರಣಗಳು ಬಹುತೇಕ ದಿನ ಒಂದಂಕಿಯಲ್ಲಿಯೇ ಇತ್ತು. ಆದರೆ, ಈಗ 50ರ ಗಡಿ ದಾಟಿದ್ದು, ಮರಣ ಪ್ರಮಾಣ ದರ ಶೇ 0.54ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 40 ಮಂದಿ, ಮೈಸೂರಿನಲ್ಲಿ ಮೂವರು, ಬೀದರ್ ಮತ್ತು ಚಾಮರಾಜನಗರದಲ್ಲಿ ತಲಾ ಇಬ್ಬರು, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಚಿಕ್ಕಬಳ್ಳಾಪುರ ಹಾಗೂ ರಾಮನಗರದಲ್ಲಿ ತಲಾ ಒಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ. ಇವರಲ್ಲಿ ಮೂವರನ್ನು ಹೊರತುಪಡಿಸಿ ಉಳಿದವರು 50 ವರ್ಷ ಮೇಲ್ಪಟ್ಟವರಾಗಿದ್ದಾರೆ. ಈವರೆಗೆ ಕೋವಿಡ್‌ಗೆ ಮೃತಪಟ್ಟವರ ಸಂಖ್ಯೆ13 ಸಾವಿರದತ್ತ ದಾಪುಗಾಲು (12,941) ಇರಿಸಿದೆ.
11 ಜಿಲ್ಲೆಯಲ್ಲಿ ಅಧಿಕ ಪ್ರಕರಣ: 24 ಗಂಟೆಗಳ ಅವಧಿಯಲ್ಲಿ 9,579 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. 9 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ 50ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಒಂದು ದಿನದ ಅವಧಿಯಲ್ಲಿ 1.16 ಲಕ್ಷ ಮಾದರಿಗಳನ್ನು ಪರೀಕ್ಷಿಸಿಲಾಗಿದೆ. ಬೆಂಗಳೂರಿನಲ್ಲಿ 6,387 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಅದೇ ರೀತಿ, ಬೀದರ್ (465), ಮೈಸೂರು (362), ಕಲಬುರ್ಗಿ (335), ತುಮಕೂರು (239), ಬೆಂಗಳೂರು ಗ್ರಾಮಾಂತರ (192), ಬಳ್ಳಾರಿ (132), ವಿಜಯಪುರ (122), ಚಿಕ್ಕಬಳ್ಳಾಪುರ (120), ಹಾಸನ (113), ಉಡುಪಿ (101) ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ವರದಿಯಾಗಿವೆ. ಸೋಂಕು ದೃಢ ಪ್ರಮಾಣ ಶೇ 8.24ಕ್ಕೆ ಏರಿಕೆಯಾಗಿದೆ.
ಈ ತಿಂಗಳು 12 ದಿನಗಳಲ್ಲಿಯೇ 77,865 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 10.74 ಲಕ್ಷ ದಾಟಿದೆ. ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 56 ಸಾವಿರ ದಾಟಿದ್ದು, ಸದ್ಯ ರಾಜ್ಯದಲ್ಲಿ 75,985 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕಿತರಲ್ಲಿ 2,767 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 9.85 ಲಕ್ಷ ದಾಟಿದೆ.
ರಾಜ್ಯದಲ್ಲಿ ಸೋಮವಾರ 4,981 ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ. ಮಧ್ಯಾಹ್ನ 3.30ರ ವೇಳೆಗೆ 82,240 ಮಂದಿ ಲಸಿಕೆ ಪಡೆದುಕೊಂಡಿದ್ದರು. ಈವರೆಗೆ 59.88 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.