ADVERTISEMENT

ಶಿರಸಿ ಮಹಿಳೆಯ ಕುವೈತ್ ಲಾಕ್‌ಡೌನ್ ಅನುಭವ: ಗುಂಪು ಚದುರಿಸಲು ಡ್ರೋನ್ ಬಳಕೆ

ಕೋವಿಡ್–19: ಲಾಕ್‌ಡೌನ್ ಅನುಭವ ಹಂಚಿಕೊಂಡ ಶಿರಸಿಯ ಮಹಿಳೆ

ಸಂಧ್ಯಾ ಹೆಗಡೆ
Published 30 ಮಾರ್ಚ್ 2020, 6:20 IST
Last Updated 30 ಮಾರ್ಚ್ 2020, 6:20 IST
ಲಾಕ್‌ಡೌನ್‌ ಇರುವ ಮಂಗಾಫ್‌ನ ರಸ್ತೆಗಳು
ಲಾಕ್‌ಡೌನ್‌ ಇರುವ ಮಂಗಾಫ್‌ನ ರಸ್ತೆಗಳು   
""

ಶಿರಸಿ: ‘ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್–19, ನಾವಿರುವ ದೇಶಕ್ಕೆ ಪ್ರವೇಶ ಮಾಡಿರುವ ಸುದ್ದಿ ಕೇಳಿದಾಕ್ಷಣ ಒಮ್ಮೆ ನಡುಕ ಹುಟ್ಟಿತ್ತು. ಆದರೆ, ಇಲ್ಲಿನ ಸರ್ಕಾರ ಕೈಗೊಂಡಿರುವ ಕ್ರಮಗಳು ಆತ್ಮವಿಶ್ವಾಸ ತುಂಬಿವೆ. ಹೊರದೇಶದಲ್ಲಿದ್ದರೂ ಅಭದ್ರ ಭಾವನೆಗಳು ನಮ್ಮನ್ನು ಕಾಡುತ್ತಿಲ್ಲ’ ಎನ್ನುತ್ತಲೇ ಮಾತಿಗಿಳಿದರು ಕುವೈತ್‌ ದೇಶದ ಮಂಗಾಫ್‌ನಲ್ಲಿರುವ ಶಿರಸಿಯ ಪ್ರತಿಮಾ ಹೆಗಡೆ.

ಪತಿ, ಎಂಜಿನಿಯರ್ ಗಣಪತಿ ಹೆಗಡೆ ಹಾಗೂ ಪುತ್ರ ನಚಿಕೇತ್ ಜತೆ ಅಲ್ಲಿ ನೆಲೆಸಿರುವ ಅವರು, ಭಾನುವಾರ ವಾಟ್ಸ್‌ಆ್ಯಪ್ ಕರೆ ಮೂಲಕ ಅಲ್ಲಿನ ಪ್ರಸ್ತುತ ಸ್ಥಿತಿಯನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು. ‘ಇಲ್ಲಿ ಲಾಕ್‌ಡೌನ್ ಶುರುವಾಗಿ ಒಂದೂವರೆ ತಿಂಗಳಾಯಿತು. ಫೆಬ್ರುವರಿ 24ಕ್ಕೆ ಇಲ್ಲಿ ಇದ್ದ ರಾಷ್ಟ್ರೀಯ ದಿನಾಚರಣೆಯನ್ನೂ ರದ್ದುಗೊಳಿಸಲಾಯಿತು. ಆದೇಶ ಹೊರಟ ಕ್ಷಣದಿಂದ ಜನರು ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಬಂದಿದ್ದಾರೆ. ಜನಸಂಚಾರದ ಮೇಲೆ ನಿಗಾವಹಿಸಲು ಸೇನಾ ಸಿಬ್ಬಂದಿ ನಿಯೋಜಿಸಲಾಗಿದೆ. 10–15 ಜನರು ಗುಂಪಾಗಿ ನಿಂತಿದ್ದು ಕಂಡರೆ ತಕ್ಷಣ ‘ಡ್ರೋನ್’ ಅಲ್ಲಿಗೆ ಹಾಜರಾಗಿ, ಎಲ್ಲರೂ ಚದುರುವಂತೆ ಸೂಚನೆ ನೀಡುತ್ತದೆ’ ಎನ್ನುತ್ತಾರೆ ಅವರು.

ಪ್ರಮುಖ ಕೇಂದ್ರಗಳಲ್ಲಿ ಫಿವರ್ ಡಿಟೆಕ್ಟರ್

ADVERTISEMENT

ಕುವೈತ್ ಜನರು ರಾತ್ರಿ ಪ್ರಯಾಣ ಪ್ರಿಯರು. ಹೀಗಾಗಿ, 20 ದಿನಗಳಿಂದೀಚೆಗೆ ಪ್ರತಿದಿನ ಸಂಜೆ 5ರಿಂದ ಬೆಳಗಿನ ಜಾವ 4.30ರವರೆಗೆ ಕರ್ಫ್ಯೂ ವಿಧಿಸಲಾಗುತ್ತಿದೆ. ಎಲ್ಲ ಸರ್ಕಾರಿ ಕಚೇರಿಗಳು, ವಿಮಾನ ಹಾರಾಟ ರದ್ದಾಗಿವೆ. ಸೂಪರ್ ಮಾರ್ಕೆಟ್‌ನಂತಹ ಕೆಲವೇ ಅಂಗಡಿಗಳು ಮಾತ್ರ ನಿರ್ದಿಷ್ಟ ಸಮಯದಲ್ಲಿ ತೆರೆದಿರುತ್ತವೆ. ಪ್ರತಿಯೊಂದು ಪ್ರಮುಖ ಸ್ಥಳದಲ್ಲಿಯೂ ಫಿವರ್ ಡಿಟೆಕ್ಟರ್ ಅಳವಡಿಸಲಾಗಿದೆ. ಹೀಗಾಗಿ, ಕೊರೊನಾ ವೈರಸ್ ಸೋಂಕಿದ್ದವರು ತಪ್ಪಿಸಿಕೊಂಡು ಜನರ ನಡುವೆ ಸಂಚರಿಸಲು ಸಾಧ್ಯವೇ ಇಲ್ಲ. ಒಮ್ಮೆ ನಾಲ್ಕು ಜನರಿಗೆ ಮಾತ್ರ ಪ್ರವೇಶ. ಸಮಯ ಮೀರಿದರೆ ಸರದಿಯಲ್ಲಿ ನಿಂತವರು ಮತ್ತೆ ಮರುದಿನ ಬರಬೇಕು ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.

ಸಂಗ್ರಹಕ್ಕೆ ಅವಕಾಶವಿಲ್ಲ

ಲಾಕ್‌ಡೌನ್ ಇದ್ದ ಕಾರಣಕ್ಕೆ ದಿನಬಳಕೆ ಸಾಮಗ್ರಿಗಳನ್ನು ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸುವಂತಿಲ್ಲ. ಪ್ರತಿಬಾರಿ ಅಂಗಡಿಗೆ ಹೋಗುವಾಗ ಹಿಂದಿನ ಖರೀದಿಯ ಬಿಲ್ ಒಯ್ಯಬೇಕು. ಇಲ್ಲವಾದಲ್ಲಿ ಅವರೇ ನಮ್ಮ ಹಳೆಯ ಖರೀದಿಯ ವಿವರವನ್ನು ಕಂಪ್ಯೂಟರ್‌ನಲ್ಲಿ ಪರೀಕ್ಷಿಸುತ್ತಾರೆ. ಸಾಮಗ್ರಿಗಳ ಕೃತಕ ಕೊರತೆ ಸೃಷ್ಟಿಯಾಗಬಾರದೆಂಬುದು ಇದರ ಉದ್ದೇಶ. ಇವೆಲ್ಲಕ್ಕಿಂತ ಮುಖ್ಯವಾಗಿ, ಆಯಾ ಪ್ರದೇಶದವರು ಅದೇ ಪ್ರದೇಶ ವ್ಯಾಪ್ತಿಯ ಮಾರ್ಕೆಟ್‌ಗಳಿಗೆ ಹೋಗಬೇಕು. ಸ್ವಂತ ವಾಹನವಿದೆಯೆಂದು ಬೇರೆಡೆ ಹೋಗಿ ಮತ್ತಷ್ಟು ಖರೀದಿ ಮಾಡಲು ಇಲ್ಲಿ ಅವಕಾಶವಿಲ್ಲ. ಇದರಿಂದ ಜನರಿಗೆ ಅನುಕೂಲವೇ ಆಗಿದೆ ಎನ್ನುತ್ತಾರೆ ಪ್ರತಿಮಾ.

ಪುತ್ರ ನಚಿಕೇತ್ ಜತೆ ಪ್ರತಿಮಾ ಹೆಗಡೆ

ಇ–ಲರ್ನಿಂಗ್ ಶುರು: ಮನೆ ಬಾಡಿಗೆ ಮನ್ನಾ

ಕುವೈತ್‌ನಲ್ಲಿ ಜೂನ್‌ನಿಂದ ಆಗಸ್ಟ್‌ವರೆಗೆ ಮಕ್ಕಳಿಗೆ ಶಾಲೆಗೆ ರಜೆ. ಈಗ ಮಕ್ಕಳು ಮನೆಯಲ್ಲೇ ಇರುವ ಕಾರಣ ಶಾಲೆಗಳು ಇ–ಲರ್ನಿಂಗ್ ಪ್ರಾರಂಭಿಸಿವೆ.

ಇಲ್ಲಿನ ಸರ್ಕಾರ ಕೈಗೊಂಡಿರುವ ಕ್ರಮಗಳೇ ಕೋವಿಡ್–19 ನಿಯಂತ್ರಣಕ್ಕೆ ಬರಲು ಸಾಧ್ಯವಾಗಿದೆ. 255ರಷ್ಟು ಪ್ರಕರಣ ಮಾತ್ರ ಇಲ್ಲಿ ದಾಖಲಾಗಿವೆ. ಹೊಸ ಪ್ರಕರಣಗಳು ಕಡಿಮೆಯಾಗಿವೆ ಎಂದು ಸರ್ಕಾರ ಹೇಳುತ್ತಿದೆ. ಸಣ್ಣ ಉದ್ದಿಮೆಗೆ ನೆರವಾಗಲು ಕ್ರೆಡಿಟ್ ಕಾರ್ಡ್ ಮತ್ತು ಸಾಲದ ಕಂತು ಮರುಪಾವತಿಸಲು ಸರ್ಕಾರ ಆರು ತಿಂಗಳ ಕಾಲಾವಕಾಶ ನೀಡಿದೆ. ಕೋವಿಡ್‌–19 ಕಾಯಿಲೆಯಿದ್ದರೂ ಇದನ್ನು ಗುಟ್ಟಾಗಿ ಇಟ್ಟುಕೊಂಡು ಬೇರೆಯವರಿಗೆ ಅದನ್ನು ಹರಡುವವರಿಗೆ 10 ವರ್ಷ ಜೈಲು ಶಿಕ್ಷೆ, 1ಲಕ್ಷ ಡಾಲರ್‌ವರೆಗೆ ದಂಡ ವಿಧಿಸುವ ಕಾನೂನನ್ನು ಕುವೈತ್ ನ್ಯಾಷನಲ್ ಅಸ್ಸೆಂಬ್ಲಿ ಪಾಸು ಮಾಡಿದೆ. ಲಾಕ್‌ಡೌನ್ ಇರುವ ಕಾರಣಕ್ಕೆ ಮನೆ ಬಾಡಿಗೆಯನ್ನು ಸಹ ಸದ್ಯಕ್ಕೆ ಮನ್ನಾ ಮಾಡಿದ್ದಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.