ADVERTISEMENT

ಕೋವಿಡ್ 19 | ಮೂತ್ರದಿಂದ ಕೊರೊನಾ ಹರಡುವುದಕ್ಕೆ ಪುರಾವೆಯಿಲ್ಲ: ಡಾ.ಗಜಾನನ ನಾಯಕ

​ಪ್ರಜಾವಾಣಿ ವಾರ್ತೆ
Published 11 ಮೇ 2020, 14:04 IST
Last Updated 11 ಮೇ 2020, 14:04 IST
ಕಾರವಾರ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಆರಂಭಿಸಲಾಗಿರುವ ‘ಕೋವಿಡ್ 19’ ವಾರ್ಡ್ 
ಕಾರವಾರ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಆರಂಭಿಸಲಾಗಿರುವ ‘ಕೋವಿಡ್ 19’ ವಾರ್ಡ್    

ಕಾರವಾರ: ಕೊರೊನಾ ವೈರಸ್ (SARS–CoV 2) ಮಲ, ಮೂತ್ರದ ಮೂಲಕವೂಹರಡುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ತಿಳಿಸಿದ್ದಾರೆ.

ಇತ್ತೀಚಿನ ಅಧ್ಯಯನದ ಪ್ರಕಾರ ಮಲ ಹಾಗೂ ಮೂತ್ರದಲ್ಲಿ ಕೊರೊನಾ ವೈರಸ್ ಅತಿಕಡಿಮೆ ಪ್ರಮಾಣದಲ್ಲಿ ಕಂಡು ಬಂದಿದೆ.ಈ ಕುರಿತು ಜನರು ಆತಂಕಕ್ಕೆ ಒಳಗಾಗಬೇಕಿಲ್ಲ. ಕಾರವಾರ ವೈದ್ಯಕೀಯ ಸಂಸ್ಥೆಯಲ್ಲಿ ಒಳಚರಂಡಿ ಸಂಸ್ಕರಣಾ ಘಟಕವಿದೆ.ಇಲ್ಲಿಯ ನೀರನ್ನು ಈ ಘಟಕದಲ್ಲಿ ಸಂಸ್ಕರಿಸಿದ ನಂತರವೇ ವಿಲೇವಾರಿ ಮಾಡಲಾಗುತ್ತಿದೆ. ಆದ್ದರಿಂದ ಜನರು ಅನಗತ್ಯವಾಗಿ ಭಯ ಪಡಬೇಕಾಗಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕ್ರಿಮ್ಸ್’, ಕೋವಿಡ್–19 ವಾರ್ಡ್‌ನಲ್ಲಿ ಉತ್ಪತ್ತಿಯಾಗುವ ಎಲ್ಲಾ ಜೈವಿಕ ವೈದ್ಯಕೀಯ ತಾಜ್ಯಗಳನ್ನು ಪ್ರತ್ಯೇಕಿಸಲಾಗುತ್ತದೆ. ನಂತರ ಅದನ್ನು ವೈದ್ಯಕೀಯ ತಾಜ್ಯ ವಿಲೇವಾರಿ ಮಾಡುವ ಸಂಸ್ಥೆಗೆ ಹಸ್ತಾಂತರಿಸಲಾಗುತ್ತದೆ. ಇಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ಅನ್ವಯ ತರಬೇತಿ ನೀಡಲಾಗಿದೆ. ಎಲ್ಲ ಸಿಬ್ಬಂದಿಯನ್ನು ಅವರ ಕರ್ತವ್ಯದ ನಂತರ ಪ್ರತ್ಯೇಕವಾದ, ನಿಗದಿತ ಸ್ಥಳದಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ’ ಎಂದುಹೇಳಿದ್ದಾರೆ.

ADVERTISEMENT

ಸ್ವಲ್ಪ ಸಮಾಧಾನ:ಮೂರು ದಿನಗಳಿಂದ ಕೋವಿಡ್ 19 ಪ್ರಕರಣಗಳಲ್ಲಿ ಸತತ ಏರಿಕೆ ಕಂಡು ಆತಂಕಗೊಂಡಿದ್ದ ಜಿಲ್ಲೆಯ ಜನರುಸೋಮವಾರ ಸ್ವಲ್ಪಮಟ್ಟಿನ ಸಮಾಧಾನ ಕಂಡರು. ಆರೋಗ್ಯ ಇಲಾಖೆಯು ಬೆಳಿಗ್ಗೆ ಮತ್ತು ಸಂಜೆ ಬಿಡುಗಡೆ ಮಾಡುವ ಆರೋಗ್ಯ ಬುಲೆಟಿನ್‌ನಲ್ಲಿ ಒಂದೂ ಪ್ರಕರಣಗಳ ಉಲ್ಲೇಖವಿರಲಿಲ್ಲ. ಜಿಲ್ಲೆಯಲ್ಲಿ ಇನ್ಯಾರಿಗೂ ಕೋವಿಡ್ ಬಾರದಿರಲಿ ಎಂದು ಸಾರ್ವಜನಿಕರು ಮಾತನಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.