ADVERTISEMENT

ಕೋವಿಡ್: ಗಂಭೀರ ಲಕ್ಷಣ ಇದ್ದಲ್ಲಿ ಆಸ್ಪತ್ರೆ ಚಿಕಿತ್ಸೆ

ಕೊರೊನಾ ಒಂದಷ್ಟು ತಿಳಿಯೋಣ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 20:30 IST
Last Updated 6 ಅಕ್ಟೋಬರ್ 2020, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ಸೋಂಕಿತ ವ್ಯಕ್ತಿ ಮತ್ತು ಅವರನ್ನು ಆರೈಕೆ ಮಾಡುವವರು ತಮ್ಮ ಆರೋಗ್ಯದ ಮೇಲೆ ನಿಗಾ ಇಡಬೇಕು. ಗಂಭೀರ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಈ ಕಾಯಿಲೆಯು ಎಲ್ಲ ವಯೋಮಾನದವರಲ್ಲಿಯೂ ಕಾಣಿಸಿಕೊಳ್ಳಲಿದೆ. ಮಕ್ಕಳಲ್ಲಿ ಈ ಸೋಂಕು ಸಾಮಾನ್ಯವಾಗಿ ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ಮಧುಮೇಹ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಹೊಂದಿರುವವರು ಹಾಗೂವಯಸ್ಸಾದವರು ಸೋಂಕು ಕಾಣಿಸಿಕೊಂಡಾಗ ಹೆಚ್ಚಿನ ಆರೈಕೆ ಮಾಡಿಕೊಳ್ಳಬೇಕು.

ಈ ಸೋಂಕಿಗೆ ಚಿಕಿತ್ಸೆ ನೀಡಲು ಸದ್ಯಕ್ಕೆ ಯಾವುದೇ ನಿರ್ದಿಷ್ಟ ವೈರಾಣು ನಿರೋಧಕ ಔಷಧಗಳಿಲ್ಲ. ಆದರೆ, ಸೋಂಕಿತರಲ್ಲಿ ಶೇ 80 ರಷ್ಟು ಮಂದಿ ಯಾವುದೇ ವಿಶೇಷ ಚಿಕಿತ್ಸೆ ಪಡೆಯದೆಯೇ ಗುಣಮುಖರಾಗುತ್ತಿದ್ದಾರೆ. ಕಾಯಿಲೆಯ ಲಕ್ಷಣಗಳು ಗಂಭೀರ ಸ್ವರೂಪವಿದ್ದಲ್ಲಿ ಆಸ್ಪತ್ರೆಗೆ ದಾಖಲಾಗಬೇಕು ಎಂದು ಇಲಾಖೆ ತಿಳಿಸಿದೆ.

ADVERTISEMENT

ವೈದ್ಯಕೀಯ ಚಿಕಿತ್ಸೆ ಯಾವಾಗ?

l ಉಸಿರಾಟದ ಸಮಸ್ಯೆ ಇದ್ದಾಗ

l ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ 95ಕ್ಕಿಂತ ಕಡಿಮೆ ಇದ್ದಲ್ಲಿ

l ಎದೆಯಲ್ಲಿ ನಿರಂತರ ನೋವು ಹಾಗೂ ಒತ್ತಡವಿದ್ದಲ್ಲಿ

l ಮಾನಸಿಕ ಗೊಂದಲ ಅಥವಾ ಜಾಗೃತ ಸ್ಥಿತಿ ಇಲ್ಲದಿರುವುದು

l ಮಂದವಾದ ಮಾತು ಹಾಗೂ ಮಾತನಾಡುವಾಗ ತೊದಲುವಿಕೆ

l ದೇಹದಲ್ಲಿನ ಅಂಗಗಳ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸ ಹಾಗೂ ಸಮಸ್ಯೆ ಇದ್ದಲ್ಲಿ

l ಮುಖದಲ್ಲಿ ದೌರ್ಬಲ್ಯ ಹಾಗೂ ದೇಹದಲ್ಲಿನ ವಿವಿಧ ಭಾಗಗಳು ಮರಗಟ್ಟುವಿಕೆ

l ತುಟಿಗಳು ಅಥವಾ ಮುಖದ ಬಣ್ಣ ಬದಲಾಗುವುದು ಕಂಡಾಗ

ಮನೆ ಆರೈಕೆ: ರೋಗಿಗಳಿಗೆ ಸೂಚನೆ

l ಯಾವಾಗಲೂ ವೈದ್ಯಕೀಯ ಅಥವಾ ಎನ್‌–95 ಮುಖಗವಸು ಧರಿಸಿರಬೇಕು

l ಬಳಸಿ ಬಿಸಾಡುವ ಮುಖಗವಸಿಗೆ 8 ಗಂಟೆಗಳ ಬಳಿಕ ಸೋಡಿಯಂ ಹೈಪೋ–ಕ್ಲೋರೈಟ್ ದ್ರಾವಣವನ್ನು ಸಿಂಪಡಿಸಿ, ವಿಲೇವಾರಿ ಮಾಡಬೇಕು

l ಗೊತ್ತುಪಡಿಸಿದ ಕೊಠಡಿಯಲ್ಲಿ ನಿಗದಿತ ಅವಧಿವರೆಗೆ ಇರಬೇಕು. ಇತರರಿಂದ 2 ಮೀ. ಅಂತರ ಕಾಯ್ದುಕೊಳ್ಳಬೇಕು

l ಪ್ರತಿನಿತ್ಯ ಕನಿಷ್ಠ 2 ಲೀ. ಕುದಿಸಿದ ನೀರನ್ನು ಕುಡಿಯಬೇಕು

l ಕೆಮ್ಮುವಾಗ, ಸೀನುವಾಗ ಮೊಣಕೈ, ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ಬಳಸಬೇಕು

l ಕನಿಷ್ಠ 40 ಸೆಕೆಂಡ್‌ಗಳ ಕಾಲ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು

l ಟವೆಲ್, ಪಾತ್ರೆಗಳು ಸೇರಿದಂತೆ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳಬಾರದು

l ಆಗಾಗ ಕೊಠಡಿಯನ್ನು ಸೋಂಕು ನಿವಾರಕ ದ್ರಾವಣದಿಂದ ಸಿಂಪಡಿಸಬೇಕು

l ಸ್ನಾನ ಕೊಠಡಿ, ಶೌಚಾಲಯವನ್ನು ದಿನಕ್ಕೆ ಒಮ್ಮೆಯಾದರೂ ಸ್ವಚ್ಛಪಡಿಸಬೇಕು

l ಪ್ರತಿದಿನ ಪಲ್ಸ್‌ ಆಕ್ಸಿಮೀಟರ್ ಮತ್ತು ಡಿಜಿಟಲ್ ಥರ್ಮಾಮೀಟರ್‌ ಮೂಲಕ ಆರೋಗ್ಯ ಸ್ಥಿತಿ ಪರಿಶೀಲಿಸಬೇಕು

l ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು

l ಧೂಮಪಾನ, ತಂಬಾಕು ಉತ್ಪನ್ನ, ಮದ್ಯಪಾನ ತ್ಯಜಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.