ADVERTISEMENT

ಕೋವಿಡ್ ಲಸಿಕೆ:10,060 ಮಂದಿಗೆ ಎರಡನೇ ಡೋಸ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 20:02 IST
Last Updated 15 ಫೆಬ್ರುವರಿ 2021, 20:02 IST
   

ಬೆಂಗಳೂರು: ರಾಜ್ಯದ 30 ಜಿಲ್ಲೆಗಳಲ್ಲೂ ಕೋವಿಡ್‌ ಲಸಿಕೆಯ ಎರಡನೇ ಡೋಸ್ ವಿತರಣೆ ಸೋಮವಾರ ಆರಂಭಗೊಂಡಿದ್ದು, ನಿಗದಿ ಪಡಿಸಿದ್ದ ಫಲಾನುಭವಿಗಳಲ್ಲಿ10,060 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.

ಕಳೆದ ಜ.16ರಂದು ರಾಜ್ಯದ 243 ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ಚಾಲನೆ ನೀಡಲಾಗಿತ್ತು. ಅಂದು 13 ಸಾವಿರ ಮಂದಿ ಹಾಜರಾಗಿ ಲಸಿಕೆ ಪಡೆದುಕೊಂಡಿದ್ದರು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಇದೀಗ ಎರಡನೇ ಡೋಸ್ ಪ್ರಾರಂಭಿಸಲಾಗಿದೆ.

ವಿಜಯಪುರ (1,718),ಕೊಡಗು (1,145), ಬೆಂಗಳೂರು ನಗರ (961) ಮಂಡ್ಯ (932) ಜಿಲ್ಲೆಗಳಲ್ಲಿ ಹೆಚ್ಚು ಮಂದಿ ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಶಿವಮೊಗ್ಗ (77), ಬೀದರ್ (26) ಜಿಲ್ಲೆಗಳಲ್ಲಿ ಕಡಿಮೆ ಜನ ಲಸಿಕೆಗೆ ಆಸಕ್ತಿ ತೋರಿದ್ದು, ಬೆಳಗಾವಿಯಲ್ಲಿ ಒಬ್ಬರೂ ಲಸಿಕೆ ಹಾಕಿಸಿಕೊಂಡಿಲ್ಲ.

ADVERTISEMENT

ನಿಗದಿ ಪಡಿಸಿದ ಫಲಾನುಭವಿಗಳಲ್ಲಿ ಕೆಲವರು ಹಿಂಜರಿಕೆ ತೋರಿದಂತೆ ವಿವಿಧ ಕಾರಣಗಳಿಂದ ಗೈರಾಗಿದ್ದಾರೆ. ಲಸಿಕೆ ಪಡೆದವರಲ್ಲಿ ಯಾರಲ್ಲಿಯೂ ತೀವ್ರ ಮತ್ತು ಗಂಭೀರ ಸ್ವರೂಪದ ಅಡ್ಡಪರಿಣಾಮಗಳು ಕಾಣಿಸಿಕೊಂಡಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈವರೆಗೆ 8,21,939 ಆರೋಗ್ಯ ಕಾರ್ಯಕರ್ತರನ್ನು ಕೋವಿಡ್ ಲಸಿಕೆ ಪಡೆಯಲು ಗುರುತಿಸಲಾಗಿತ್ತು. ಇವರಲ್ಲಿ 4,10,819 ಮಂದಿ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಇದರಿಂದ ಶೇ 51ರಷ್ಟು ಲಸಿಕೆ ಗುರಿ ಸಾಧ್ಯವಾಗಿದೆ.

2,88,441 ಮಂದಿ ಮುಂಚೂಣಿ ಕೋವಿಡ್ ಯೋಧರಲ್ಲಿ89,595 ಮಂದಿ ಮೊದಲ ಡೋಸ್ ಹಾಕಿಸಿಕೊಂಡಿದ್ದರು. ಒಟ್ಟಾರೆ ನಿಗದಿ ಪಡಿಸಿದ್ದ ಫಲಾನುಭವಿಗಳಲ್ಲಿ ಶೇ 31ರಷ್ಟು ಮಂದಿ ಹಾಜರಾಗಿದ್ದು, ಉಳಿದವರು ಗೈರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.