ADVERTISEMENT

ಕೋವಿಡ್ ಗೆದ್ದವರ ಕಥೆಗಳು | ‘ದೃಶ್ಯ ಮಾಧ್ಯಮಗಳಿಂದ ಭಯ ಬಿಂಬಿತ’

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 11:09 IST
Last Updated 25 ಜುಲೈ 2020, 11:09 IST
ಡಾ.ಸಿದ್ದು ಮೇತ್ರಿ
ಡಾ.ಸಿದ್ದು ಮೇತ್ರಿ   

ಇಂಡಿ: ಕೋವಿಡ್ ರೋಗದ ಬಗ್ಗೆ ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿರುವಷ್ಟು ದೊಡ್ಡ ರೋಗವಲ್ಲ. ಅದು ನೆಗಡಿ, ಜ್ವರ ಮತ್ತು ಕೆಮ್ಮಿನಷ್ಟೇ ಶಕ್ತಿ ಪಡೆದುಕೊಂಡಿರುವ ಒಂದು ಸಾಮಾನ್ಯ ರೋಗವಾಗಿದ್ದು, ಇದಕ್ಕೆ ಯಾರೂ ಅಂಜುವ ಅಗತ್ಯವಿಲ್ಲ ಎಂದು ಕೋವಿಡ್‌ನಿಂದ ಗುಣಮುಖರಾಗಿರುವ ಆಯುಷ್ ವೈದ್ಯ ಡಾ.ಸಿದ್ದು ಮೇತ್ರಿ ಅವರ ಸ್ಪಷ್ಟ ಮಾತು.

‘ನನಗೆ ಜುಲೈ 14ರಂದು ಕೋವಿಡ್ ದೃಢಪಟ್ಟಿತ್ತು. ಮನೆಯಲ್ಲಿಯೇ ಇದ್ದು, ಕೆಮ್ಮು, ಜ್ವರ ಮತ್ತು ನೆಗಡಿಗೆ ತೆಗೆದುಕೊಳ್ಳುವ ಸಾಮಾನ್ಯ ಹೋಮಿಯೋಪಥಿಕ್ ಗುಳಿಗೆಗಳನ್ನು ತೆಗೆದುಕೊಂಡಿದ್ದೇನೆ. ಕೇವಲ 4 ರಿಂದ 5 ದಿನಗಳಲ್ಲಿ ಗುಣಮುಖನಾಗಿದ್ದೇನೆ. ಆದರೂ ಕೂಡಾ 10 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿದ್ದು, ಅವಧಿ ಪೂರ್ಣಗೊಳಿಸಿದ್ದೇನೆ’ ಎಂದರು.

‘ನನ್ನ ಮನೆಯಲ್ಲಿ 70 ವರ್ಷದ ನನ್ನ ತಾಯಿಗೆ (ಬಿಪಿ, ಶುಗರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿವೆ) ಮತ್ತು 12 ವರ್ಷದ ನನ್ನ ಮಗನಿಗೆ ಸ್ವಲ್ಪ ಕೆಮ್ಮು, ನೆಗಡಿ ಬಂದಿತ್ತು. ಹೋಮಿಯೋಪಥಿಕ್ ಗುಳಿಗೆ ಕೊಟ್ಟಿದ್ದೇನೆ. ಅವರು 3 ದಿನಗಳಲ್ಲಿ ಗುಣಮುಖರಾಗಿದ್ದಾರೆ. ಮನೆಯಲ್ಲಿ 75 ವರ್ಷದ ನನ್ನ ತಂದೆ ಮತ್ತು 14 ವರ್ಷದ ನನ್ನ ಮಗಳಿದ್ದಾಳೆ. ಅವರಿಗೆ ಯಾವುದೇ ರೋಗದ ಲಕ್ಷಣಗಳಿಲ್ಲ. ಅವರು ದಿನನಿತ್ಯದ ತಮ್ಮ ಎಲ್ಲ ಕೆಲಸಗಳನ್ನು ಮಾಡಿಕೊಂಡು ಆರೋಗ್ಯವಾದ್ದಾರೆ’ ಎಂದು ತಮ್ಮ ಅನುಭವ ಹಂಚಿಕೊಂಡರು.

ADVERTISEMENT

‘ಈ ರೋಗದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದು ಬೇಡ. ಸಾಮಾನ್ಯ ಔಷಧ ತೆಗೆದುಕೊಂಡರೂ ಗುಣಮುಖರಾಗುತ್ತಾರೆ. ಸಾವಿಗೆ ಆಹ್ವಾನ ನೀಡುವ ರೋಗ ಇದಲ್ಲ. ಇದೊಂದು ಸಾಮಾನ್ಯ ರೋಗ ಎನ್ನುವುದನ್ನು ಮೊದಲು ಅರಿಯಬೇಕು.
ಕೆಮ್ಮು, ಜ್ವರ ಮತ್ತು ನೆಗಡಿಗೆ ಯಾವ ಔಷಧ ತೆಗೆದುಕೊಳ್ಳುತ್ತೇವೆಯೋ ಅವುಗಳನ್ನೇ ತೆಗೆದುಕೊಂಡರೆ ಕೋವಿಡ್-19 ವೈರಸ್‌ನಿಂದ ಮುಕ್ತಿ ಪಡೆದುಕೊಳ್ಳಬಹುದು. ಜನಸಾಮಾನ್ಯರು ಈ ರೋಗಕ್ಕೆ ಹೆದರುವ ಅಗತ್ಯವಿಲ್ಲ’ ಎಂದರು.

‘ನೆಗಡಿ ಕೂಡಾ ಒಬ್ಬರಿಂದ ಒಬ್ಬರಿಗೆ ತಗುಲುತ್ತದೆ. ಅದರಂತೆ ಕೋವಿಡ್-19 ವೈರಸ್ ಸ್ವಲ್ಪ ಬೇಗನೇ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕಾರಣ ಅಂತರ ಕಾಯ್ದುಕೊಳ್ಳಬೇಕು. ಪ್ರತಿನಿತ್ಯ ಬಿಸಿನೀರು ಸೇವನೆ ಮಾಡುತ್ತ, ಶುಂಠಿ, ಅರಿಶಿಣ, ದಾಲ್ಚಿನ್ನಿ, ಮೆಣಸು, ಲವಂಗ ಮಿಶ್ರಿತ ಕಾಡೆ ಕುಡಿಯುತ್ತಿದ್ದರೆ ಕೋವಿಡ್‌ನಿಂದ ರಕ್ಷಣೆ ಪಡೆದುಕೊಳ್ಳಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.