ADVERTISEMENT

ಕೋವಿಡ್‌: ಮರಣ ಪ್ರಮಾಣ ದರ ಇಳಿಕೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 22:00 IST
Last Updated 3 ನವೆಂಬರ್ 2021, 22:00 IST
   

ಬೆಂಗಳೂರು: ರಾಜ್ಯದಲ್ಲಿ ಬುಧವಾರ ಕೋವಿಡ್‌ ಮರಣ ಪ್ರಕರಣಗಳು ಕಡಿಮೆಯಾಗಿವೆ. ಬೆಂಗಳೂರಿನಲ್ಲಿ ಒಬ್ಬರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ.

ಇದರಿಂದ, ಇದುವರೆಗೆ ಕೋವಿಡ್‌ಗೆ ಮೃತಪಟ್ಟವರ ಒಟ್ಟು ಸಂಖ್ಯೆ 38,091ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಮರಣ ಪ್ರಮಾಣದ ದರ ಇಳಿಕೆಯಾಗಿದ್ದು, ಶೇ 0.78ರಷ್ಟು ದೃಢಪಟ್ಟಿದೆ. ಮಂಗಳವಾರ ಶೇ 2.09ರಷ್ಟಿತ್ತು.

ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಬುಧವಾರ ಅಲ್ಪ ಏರಿಕೆಯಾಗಿದೆ. 254 ಜನರಿಗೆ ಸೋಂಕು ತಗುಲಿದ್ದು, ಕೋವಿಡ್‌ ದೃಢ ಪ್ರಮಾಣ ಶೇ 0.33ರಷ್ಟಿದೆ. ಇದುವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ29.89 ಲಕ್ಷಕ್ಕೆ ಏರಿದೆ.

ADVERTISEMENT

ಒಂದು ದಿನದಲ್ಲಿ316 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 29.42 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಪ್ರಸ್ತುತ8,306 ಮಂದಿ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ 151 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ಖಾತರಿಯಾಗಿದೆ. ದಕ್ಷಿಣ ಕನ್ನಡ (12), ಮೈಸೂರು (19), ತುಮಕೂರು (11), ಉಡುಪಿ (11), ಉತ್ತರ ಕನ್ನಡದಲ್ಲಿ (12) ಎರಡಂಕಿಯಷ್ಟು ಪ್ರಕರಣಗಳು ವರದಿಯಾಗಿವೆ. ಬಾಗಲಕೋಟೆ, ಬಳ್ಳಾರಿ, ಬೀದರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಗದಗ, ಹಾವೇರಿ, ಕಲಬುರಗಿ, ಕೋಲಾರ, ಕೊಪ್ಪಳ, ವಿಜಯಪುರ, ಯಾದಗಿರಿಯಲ್ಲಿ ಹೊಸ ಪ್ರಕರಣಗಳು ದಾಖಲಾಗಿಲ್ಲ. ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಹಾಸನ, ಕೊಡಗು, ಮಂಡ್ಯ, ರಾಯಚೂರು, ರಾಮನಗರ, ಶಿವಮೊಗ್ಗದಲ್ಲಿ ಒಂದಂಕಿಗೆ ಇಳಿದಿದೆ.ಬುಧವಾರ 76,420 ಮಾದರಿಗಳನ್ನಷ್ಟೇ ಪರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.