ADVERTISEMENT

ಕೊರೊನಾ ಭೀತಿ: ಸ್ವಯಂ ಕ್ವಾರಂಟೈನ್‌ಗೆ ಒಳಗಾದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 13:53 IST
Last Updated 6 ಏಪ್ರಿಲ್ 2020, 13:53 IST
   

ಬೆಳಗಾವಿ: ಇಲ್ಲಿನ ಕುವೆಂಪು ನಗರದಲ್ಲಿರುವ ತಮ್ಮ ಮನೆಯಲ್ಲಿಯೇ ಸ್ವಯಂ ಕ್ವಾರಂಟೈನ್‌ ಒಳಗಾಗುವ ಮೂಲಕ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಕೊರೊನಾ ತಡೆ ಅಭಿಯಾನಕ್ಕೆ ಸಾಥ್‌ ನೀಡಿದ್ದಾರೆ.

ಲಕ್ಷ್ಮಿ ಅವರನ್ನು ಭೇಟಿಯಾಗಲು, ಅಹವಾಲು ಸಲ್ಲಿಸಲು ಪ್ರತಿದಿನ ಸಾವಿರಾರು ಜನರು ಬರುತ್ತಿದ್ದರು. ಲಾಕ್‌ಡೌನ್‌ ಅವಧಿಯಲ್ಲೂ ಜನರ ಓಡಾಟ ನಿಂತಿರಲಿಲ್ಲ. ಇದು ಅಕ್ಕಪಕ್ಕದ ನಿವಾಸಿಗಳಲ್ಲಿ ಭಯ, ಆತಂಕ ಮೂಡಿಸಿತ್ತು. ಕೆಲವರು ಇದರ ಬಗ್ಗೆ ಶಾಸಕಿಯವರ ಗಮನಕ್ಕೂ ತಂದಿದ್ದರು.

ಇದನ್ನು ಗಮನಿಸಿದ ಲಕ್ಷ್ಮಿ ಅವರು, ‘ಮನೆಯಿಂದ ಹೊರಗೆ ಬರಬೇಡಿ. ನಿಮ್ಮ ಆರೋಗ್ಯಕ್ಕೆ ಸಮಸ್ಯೆಯಾಗಬಹುದು. ಅಕ್ಕಪಕ್ಕದ ಜನರಿಗೂ ತೊಂದರೆಯಾಗಬಹುದು. ಇಲ್ಲಿಗೆ ಬರುವುದನ್ನು ನಿಲ್ಲಿಸಿ’ ಎಂದು ವಿನಂತಿಸಿಕೊಂಡರೂ ಜನರು ಬರುವುದು ಮುಂದುವರಿದಿತ್ತು.

ADVERTISEMENT

ಇದನ್ನು ತಡೆಯುವ ಉದ್ದೇಶದಿಂದ ಅವರೇ ಸ್ವತಃ ಪೊಲೀಸರಿಗೆ ವಿನಂತಿಸಿಕೊಂಡು, ಮನೆಗೆ ಸಂಪರ್ಕ ಕಲ್ಪಿಸುವ ಎಲ್ಲ ದಾರಿಗಳಿಗೆ ಬ್ಯಾರಿಕೇಡ್‌ ಹಾಕಿಸಿ, ಬಂದ್‌ ಮಾಡಿಸಿದ್ದಾರೆ. ತಾವೇ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

`ನಾನಿದ್ದಲ್ಲಿ ಬರುವುದು ಬೇಡ. ಇದರಿಂದ ನಿಮಗೆ ತೊಂದರೆಯಾಗಬಹುದು. ನೀವು ನಿಮ್ಮ ಮನೆಯಲ್ಲೇ ಇರಿ. ನಿಮ್ಮ ಗ್ರಾಮಗಳಿಗೆ ನಾನೇ ಬರುತ್ತೇನೆ. ನಿಮ್ಮ ಸಮಸ್ಯೆಯನ್ನು ಆಲಿಸುತ್ತೇನೆ. ಸಮಸ್ಯೆಗಳಿದ್ದಲ್ಲಿ ಫೋನ್ ಮಾಡಿದರೂ ಸ್ಪಂದಿಸುತ್ತೇನೆ' ಎಂದು ಲಕ್ಷ್ಮಿ ಹೆಬ್ಬಾಳಕರ್‌ ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.