ADVERTISEMENT

ಕೋವಿಡ್‌ನ ಹೊಸ ತಳಿ ‘ಇಟಾ’ ಮಂಗಳೂರಿನಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 1:46 IST
Last Updated 6 ಆಗಸ್ಟ್ 2021, 1:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯದಲ್ಲಿ ‘ಇಟಾ’ (ಬಿ.1.525) ಹೆಸರಿನ ಹೊಸ ತಳಿಯ ಕೊರೊನಾ ವೈರಾಣು ಗುರುವಾರ ಪತ್ತೆಯಾಗಿದೆ.

ಈ ವೈರಾಣುವಿನ ತೀವ್ರತೆ ತಿಳಿಯಲು ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎರಡು ತಿಂಗಳ ಹಿಂದೆ ಕತಾರ್‌ನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬರು ಕೋವಿಡ್ ಪೀಡಿತರಾಗಿದ್ದರು. ಅವರ ಮಾದರಿಯನ್ನು ಜಿನೋಮಿಕ್ ಸಿಕ್ವೆನ್ಸೀಸ್‌ (ಅನುಕ್ರಮಣಿಕೆ) ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವರಲ್ಲಿ ಇಟಾ ತಳಿಯ ವೈರಾಣು ಕಾಣಿಸಿಕೊಂಡಿತ್ತು ಎನ್ನುವುದು ಈಗ ದೃಢಪಟ್ಟಿದೆ. ಹೊಸದಾಗಿ ಒಂದು ಡೆಲ್ಟಾ ಪ್ಲಸ್‌ ಪ್ರಕರಣ ಕೂಡ ಖಚಿತಪಟ್ಟಿದ್ದು, ಈ ತಳಿಯ ವೈರಾಣು ಹೊಂದಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಒಂದು ದಿನದ ಅವಧಿಯಲ್ಲಿ 1.61 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. 1,785 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದ್ದು, ಶೇ 1.10ರಷ್ಟು ಸೋಂಕು ದೃಢ ಪ್ರಮಾಣ ವರದಿಯಾಗಿದೆ. ರಾಜ್ಯದ 13 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ ಹಾಗೂ 10 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ. ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡದಲ್ಲಿ 337, ಮೈಸೂರಿನಲ್ಲಿ 105 ಹಾಗೂ ಕೊಡಗಿನಲ್ಲಿ 100 ಪ್ರಕರಣಗಳು ಪತ್ತೆಯಾಗಿವೆ.

ADVERTISEMENT

ಬೆಂಗಳೂರಿನಲ್ಲಿ 414, ಉಡುಪಿಯಲ್ಲಿ 134, ಹಾಸನದಲ್ಲಿ 125 ಮಂದಿ ಸೋಂಕಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹೊಸ ‍ಪ್ರಕರಣಗಳು 100ರ ಗಡಿಯೊಳಗೆ ವರದಿಯಾಗಿವೆ. ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 29.13 ಲಕ್ಷ ದಾಟಿದೆ. ಕೊರೊನಾ ಸೋಂಕಿತರಲ್ಲಿ 1,651 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 28.52 ಲಕ್ಷ ದಾಟಿದೆ.

ಕೋವಿಡ್ ಪೀಡಿತರಲ್ಲಿ 25 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. 12 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 5, ಕೋಲಾರ, ದಕ್ಷಿಣ ಕನ್ನಡ ಹಾಗೂ ಬೆಳಗಾವಿಯಲ್ಲಿ ತಲಾ 3, ಉಡುಪಿ, ಮೈಸೂರು ಹಾಗೂ ಮಂಡ್ಯದಲ್ಲಿ ತಲಾ ಇಬ್ಬರು ಸಾವಿಗೀಡಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಮರಣ ಪ್ರಮಾಣ ದರವು ಶೇ 1.40ರಷ್ಟು ವರದಿಯಾಗಿದೆ. ಈವರೆಗೆ ಕೋವಿಡ್‌ನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 36,750ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 24,414ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.