ADVERTISEMENT

ಸ್ವಂತ ಜಮೀನಿನಲ್ಲಿ ಶವ ಸಂಸ್ಕಾರಕ್ಕೆ ಅನುಮತಿ: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 21:39 IST
Last Updated 22 ಏಪ್ರಿಲ್ 2021, 21:39 IST
   

ಬೆಂಗಳೂರು: ‘ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಲು ಸ್ವಂತ ತೋಟ, ಜಮೀನಿನಲ್ಲೂ ಅನುಮತಿ ನೀಡಲಾಗಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ತೋಟದಲ್ಲಿ, ಜಮೀನಿನಲ್ಲಿ ಮಾರ್ಗಸೂಚಿ ಪ್ರಕಾರ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

‘ತಾವರೆಕೆರೆ ಬಳಿ ತಾತ್ಕಾಲಿಕವಾಗಿ ನಾಲ್ಕು ಎಕರೆ ಜಾಗದಲ್ಲಿ ಶವ ಸುಡುವುದಕ್ಕೆ ವ್ಯವಸ್ಥೆ ಮಾಡಿದ್ದೇವೆ. ಗುರುವಾರ ಬೆಳಿಗ್ಗೆಯಿಂದ 50ರಿಂದ 60 ಮೃತದೇಹಗಳನ್ನು ಸಂಪ್ರದಾಯದ ಪ್ರಕಾರ ಸುಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ನೀಲಗಿರಿ ತೋಪು ಖರೀದಿ ಮಾಡಿ ಕಟ್ಟಿಗೆ ಸಂಗ್ರಹ ಕೂಡ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಸಮಸ್ಯೆ ಕಂಡುಬಂದಲ್ಲಿ ಅದನ್ನು ಅಲ್ಲಿಯೇ ಬಗೆಹರಿಸಲು ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಆಂಬುಲೆನ್ಸ್ ಚಾಲಕರು ಹೆಚ್ಚಿನ ಹಣ ವಸೂಲಿ ಮಾಡಿದರೆ ಅಂಥವರನ್ನು ಬಂಧಿಸುತ್ತೇವೆ. ಈ ಬಗ್ಗೆ ಗೃಹ ಸಚಿವರ ಜೊತೆಗೂ ಮಾತನಾಡಿದ್ದೇನೆ’ ಎಂದರು.

‘ಬೆಂಗಳೂರು ಸುತ್ತಮುತ್ತಲಿನ 20 ಕಿಲೊ ಮೀಟರ್‌ನಿಂದ ಎಲ್ಲರೂ ಶವ ಸಂಸ್ಕಾರಕ್ಕೆ ಇಲ್ಲಿಗೇ ಬರುತ್ತಿದ್ದಾರೆ. ಸುಡಬೇಕು ಎಂಬ ಕಾರಣಕ್ಕೆ ಇಲ್ಲಿಗೇ ತರುತ್ತಿದ್ದಾರೆ. ಈ ಕಾರಣದಿಂದ ಬೆಂಗಳೂರು ನಗರ ವ್ಯಾಪ್ತಿಯ ಚಿತಾ
ಗಾರಗಳಲ್ಲಿ ಮೃತದೇಹಗಳ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.