ADVERTISEMENT

ಕೋವಿಡ್-19 ಮರಣ: ದಕ್ಷಿಣ ರಾಜ್ಯಗಳಲ್ಲಿ ಕರ್ನಾಟಕದಲ್ಲೇ ಅಧಿಕ

ಮರಣ ಪ್ರಮಾಣ ನಿಯಂತ್ರಣ, ಲಸಿಕೆ ವಿತರಣೆಯಲ್ಲಿ ಕೇರಳವೇ ಮಾದರಿ

ವರುಣ ಹೆಗಡೆ
Published 30 ಜೂನ್ 2021, 19:44 IST
Last Updated 30 ಜೂನ್ 2021, 19:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕದಲ್ಲಿ ಈವರೆಗೆ ದೃಢಪಟ್ಟಿರುವ ಕೋವಿಡ್ ಪ್ರಕರಣಗಳಲ್ಲಿ ಪ್ರತಿ ನೂರು ಸೋಂಕಿತರಿಗೆ ತಲಾ ಒಬ್ಬರು ಮರಣ ಹೊಂದಿದ್ದಾರೆ. ದಕ್ಷಿಣ ಭಾರತದ ಐದು ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿದೆ.

ರಾಜ್ಯದಲ್ಲಿ ಕಳೆದ ವರ್ಷ ಮಾ.8 ರಂದು ಮೊದಲ ಕೋವಿಡ್ ಪ್ರಕರಣ ಹಾಗೂ ಮಾ.10ರಂದು ಮೊದಲ ಮರಣ ಪ್ರಕರಣ ವರದಿಯಾಗಿತ್ತು. ಮೊದಲನೇ ಅಲೆಯಲ್ಲಿ 9.73 ಲಕ್ಷ ಮಂದಿ ಸೋಂಕಿತರಾಗಿದ್ದರು. ಅವರಲ್ಲಿ 12,449 ಮಂದಿ ಸಾವಿಗೀಡಾಗಿದ್ದರು. ಮೊದಲ ಅಲೆಯಲ್ಲಿ ಮರಣ ಪ್ರಮಾಣ ದರವು ಶೇ 1.27ರಷ್ಟಿತ್ತು. ಎರಡನೇ ಅಲೆಯಲ್ಲಿ ಕೋವಿಡ್ ಹೊಸ ಪ್ರಕರಣಗಳ ಜತೆಗೆ ಮೃತಪಟ್ಟವರ ಸಂಖ್ಯೆ ಕೂಡ ಏರಿಕೆ ಕಂಡಿದೆ. ಮೂರುವರೆ ತಿಂಗಳಲ್ಲಿ 18.66 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್‌ ಪೀಡಿತರಾಗಿದ್ದಾರೆ. ಅವರಲ್ಲಿ 22,480 ಮಂದಿ ಮೃತಪಟ್ಟಿದ್ದಾರೆ.

6.57 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ 28.40 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರಾಗಿದ್ದು, ಸೋಂಕು ದೃಢ ಪ್ರಮಾಣ ಶೇ 2.4ರಷ್ಟಿದೆ. 35 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. 3.51 ಕೋಟಿ ಜನಸಂಖ್ಯೆ ಇರುವ ಕೇರಳದಲ್ಲಿ 29.10 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರಾಗಿದ್ದಾರೆ. ಅಲ್ಲಿ ಸೋಂಕು ದೃಢ ಪ್ರಮಾಣವು ಶೇ 10.4ರಷ್ಟಿದೆ. ಆದರೆ, ಅಲ್ಲಿ ಮರಣ ಪ್ರಮಾಣ ದರವು ಶೇ 0.4ರಷ್ಟು ಮಾತ್ರ ಇದೆ. ಕೇರಳದಲ್ಲಿ ಪ್ರತಿ ಒಂದು ಲಕ್ಷ ಜನರಿಗೆ ನಡೆಸಲಾದ ಪರೀಕ್ಷೆಯಲ್ಲಿ 8,286 ಮಂದಿ ಸೋಂಕಿತರಾಗಿರುವುದು ದೃಢಪಡುತ್ತಿದೆ. ರಾಜ್ಯದಲ್ಲಿ 4,316 ಮಂದಿ ಕೋವಿಡ್ ಪೀಡಿತರಾಗುತ್ತಿದ್ದಾರೆ.

ADVERTISEMENT

ದಕ್ಷಿಣದ ರಾಜ್ಯಗಳಲ್ಲಿ ಕೇರಳದಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪ್ರತಿ ಲಕ್ಷ ಜನರಿಗೆ ಅಲ್ಲಿ 65,289 ಮಂದಿಗೆ ಪರೀಕ್ಷೆ ನಡೆಯುತ್ತಿದೆ. ರಾಜ್ಯದಲ್ಲಿ 51,823 ಮಂದಿ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಈ ಸಂಖ್ಯೆ ತಮಿಳುನಾಡಿನಲ್ಲಿ 43,167, ಆಂಧ್ರಪ್ರದೇಶದಲ್ಲಿ 41,929 ಹಾಗೂ ತೆಲಂಗಾಣದಲ್ಲಿ 49,871 ಇದೆ.

ಪಂಚರಾಜ್ಯಗಳಲ್ಲಿ ತೆಲಂಗಾಣದಲ್ಲಿ ಅತೀ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಅಲ್ಲಿ 3.72 ಕೋಟಿ ಜನಸಂಖ್ಯೆಯಿದ್ದು, 6.22 ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗಿವೆ. 3,651 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲಿ ಮರಣ ಪ್ರಮಾಣ ದರವು ಶೇ 0.6ರಷ್ಟಿದೆ.

ಲಸಿಕೆಯಲ್ಲಿ ಮುಂಚೂಣಿ: ಲಸಿಕೆ ವಿತರಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. ನಿಗದಿಪಡಿಸಲಾದ ಫಲಾನುಭವಿಗಳಲ್ಲಿ ಶೇ 28.6ರಷ್ಟು ಮಂದಿಗೆ ಮೊದಲ ಡೋಸ್ ವಿತರಿಸಲಾಗಿದೆ. ಅವರಲ್ಲಿ ಶೇ 5.6ರಷ್ಟು ಮಂದಿ ಎರಡೂ ಡೋಸ್ ಪೂರ್ಣಗೊಳಿಸಿದ್ದಾರೆ. ಕೇರಳದಲ್ಲಿ ಶೇ 30.6ರಷ್ಟು ಮಂದಿಗೆ ಪ್ರಥಮ ಡೋಸ್ ಹಾಗೂ ಶೇ 9.1ರಷ್ಟು ಮಂದಿಗೆ ದ್ವಿತೀಯ ಡೋಸ್ ನೀಡಲಾಗಿದೆ. ತಮಿಳುನಾಡು ಲಸಿಕೆ ವಿತರಣೆಯಲ್ಲಿ ಹಿಂದೆ ಬಿದ್ದಿದ್ದು, ಅಲ್ಲಿ ಶೇ 17.1ರಷ್ಟು ಮಂದಿಗೆ ಪ್ರಥಮ ಡೋಸ್ ಹಾಗೂ ಶೇ 3.4ರಷ್ಟು ಮಂದಿಗೆ ದ್ವಿತೀಯ ಡೋಸ್ ಲಸಿಕೆ ಒದಗಿಸಲಾಗಿದೆ.

ಕೋವಿಡ್ ಚೇತರಿಕೆ ಪ್ರಮಾಣದಲ್ಲಿ ಐದು ರಾಜ್ಯಗಳಲ್ಲಿ ಕರ್ನಾಟಕ ಕಡೆಯ ಸ್ಥಾನದಲ್ಲಿದೆ. ಶೇ 95.7ರಷ್ಟು ಚೇತರಿಕೆ ಪ್ರಮಾಣವಿದೆ. ಅಂದರೇ, ಪ್ರತಿ 100 ಕೋವಿಡ್ ಪ್ರಕರಣಗಳಲ್ಲಿ 96 ಮಂದಿ ಗುಣಮುಖರಾಗುತ್ತಿದ್ದಾರೆ. ಈ ಪ್ರಮಾಣ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಶೇ 97.2ರಷ್ಟು ಇದೆ. ತಮಿಳುನಾಡಿನಲ್ಲಿ ಶೇ 97.1 ಹಾಗೂ ಕೇರಳದಲ್ಲಿ ಶೇ 96.1ರಷ್ಟು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.