ADVERTISEMENT

'ಸಾಮಾಜಿಕ ಮಾಧ್ಯಮದಲ್ಲಿ ಕೋವಿಡ್ ಸೋಂಕಿತರ ಹೆಸರು ಹಂಚಿಕೊಳ್ಳಬೇಡಿ: ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 18:46 IST
Last Updated 2 ಅಕ್ಟೋಬರ್ 2020, 18:46 IST
   

ಬೆಂಗಳೂರು: ಕೋವಿಡ್‌ ಪೀಡಿತರ ಹೆಸರನ್ನು ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬಾರದು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

‘ಜನಸಾಮಾನ್ಯರಲ್ಲಿ ಸೋಂಕಿನ ಬಗ್ಗೆ ಉಂಟಾಗಿರುವ ಭಯ ಮತ್ತು ತಪ್ಪು ಮಾಹಿತಿಯಿಂದ ಗುಣಮುಖರು ಹಾಗೂಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು ತಾರತಮ್ಯ ಎದುರಿಸುತ್ತಿದ್ದಾರೆ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರನ್ನು ನಿಂದಿಸುವುದರಿಂದ ರೋಗದ ವಿರುದ್ಧದ ನಮ್ಮ ಹೋರಾಟ ದುರ್ಬಲವಾಗುತ್ತದೆ. ಹಾಗಾಗಿ ಸೋಂಕಿನ ಬಗ್ಗೆ ಇರುವ ಸಾಮಾಜಿಕ ಕಳಂಕವನ್ನು ಕಿತ್ತೊಗೆಯಲು ಜನಸಾಮಾನ್ಯರು ಸಹಕಾರ ನೀಡಬೇಕು’ ಎಂದು ಇಲಾಖೆ ಮನವಿ ಮಾಡಿಕೊಂಡಿದೆ.

ಸೋಂಕಿತರಲ್ಲಿ ಬಹುತೇಕರು ಗುಣಮುಖರಾಗುತ್ತಿದ್ದಾರೆ. ಕೋವಿಡ್‌ ಪೀಡಿತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಮಾಜದ ಬೆಂಬಲ ಅತ್ಯವಶ್ಯಕ. ಕಾಯಿಲೆ ವಾಸಿಯಾದ ಬಳಿಕ ವ್ಯಕ್ತಿಯ ಜತೆಗೆ ಮೊದಲಿನಂತೆಯೇ ಮಾತನಾಡಬಹುದಾಗಿದ್ದು, ಅದು ಸುರಕ್ಷಿತವಾಗಿರುತ್ತದೆ. ರೋಗದಿಂದ ಗುಣಮುಖರಾದವರನ್ನು ಸಾಮಾಜಿಕವಾಗಿ ಪ್ರತ್ಯೇಕಿಸುವುದು ಅವೈಜ್ಞಾನಿಕ ಮತ್ತು ಅಮಾನವೀಯ. ವೈರಾಣು ಮತ್ತು ರೋಗದ ಬಗ್ಗೆ ಅನಗತ್ಯವಾಗಿ ಭಯ ಮತ್ತು ಗಾಬರಿ ಹುಟ್ಟಿಸಬಾರದು. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಶ್ರಮಿಸುತ್ತಿರುವಆರೋಗ್ಯ ಮತ್ತು ಪೊಲೀಸ್ ಸಿಬ್ಬಂದಿ, ಪೌರಕಾರ್ಮಿಕರನ್ನು ನಿಂದಿಸಬಾರದು ಎಂದು ಇಲಾಖೆ ತಿಳಿಸಿದೆ.

ADVERTISEMENT

ರೋಗನಿರೋಧಕ ಶಕ್ತಿ ವೃದ್ಧಿ: ಆಯುಷ್ ಇಲಾಖೆ ಸಲಹೆ

* ಕುಡಿಯಲು ಯಾವಾಗಲೂ ಬಿಸಿ ನೀರನ್ನು ಉಪಯೋಗಿಸಬೇಕು

* ಪ್ರತಿದಿನ ಯೋಗಾಸನ, ಪ್ರಾಣಾಯಾಮವನ್ನು ಕನಿಷ್ಠ 30 ನಿಮಿಷಗಳವರೆಗೆ ಮಾಡಬೇಕು

* ಅರಿಶಿನ, ಜೀರಿಗೆ, ಬೆಳ್ಳುಳ್ಳಿ ಮತ್ತು ಧನಿಯಾಗಳನ್ನು ಆಹಾರದಲ್ಲಿ ಬಳಸಬೇಕು

* ಅರಿಶಿನ ಮಿಶ್ರಿತ ಹಾಲನ್ನು ಕುಡಿಯಬೇಕು

* ಗಿಡಮೂಲಿಕೆಗಳ ಚಹಾ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಬೇಕು

* ಪುದೀನ ಎಲೆಗಳನ್ನು ಬಿಸಿ ನೀರಿಗೆ ಹಾಕಿ, ಹಬೆಯನ್ನು ತೆಗೆದುಕೊಳ್ಳಬೇಕು

* ಕೆಮ್ಮುವಾಗ ಗಂಟಲಿನಲ್ಲಿ ಕಿರಿಕಿರಿ ಇದ್ದರೆ ಸಕ್ಕರೆ ಅಥವಾ ಜೇನು ತುಪ್ಪದಲ್ಲಿ ಲವಂಗ ಪುಡಿಯನ್ನು ಬೆರೆಸಿ, ದಿನಕ್ಕೆ 2ರಿಂದ 3ಬಾರಿ ತೆಗೆದುಕೊಳ್ಳಬೇಕು

* ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಮೂಗಿನ ಎರಡೂ ಹೊಳ್ಳೆಗಳಿಗೆ ದಿನಕ್ಕೆ ಎರಡು ಬಾರಿ ಸವರಿಕೊಳ್ಳಬೇಕು

* ಒಂದು ಟೇಬಲ್ ಚಮಚ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು 2–3 ನಿಮಿಷ ಬಾಯಿಯಲ್ಲಿ ಇಟ್ಟುಕೊಂಡು ತಿರುಗಾಡಿಸಿ, ಉಗುಳಬೇಕು. ನಂತರ ಬಿಸಿ ನೀರಿನಿಂದ ಬಾಯಿಯನ್ನು ಮುಕ್ಕಳಿಸಬೇಕು. ದಿನಕ್ಕೆ ಈ ರೀತಿ ಎರಡು ಬಾರಿ ಮಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.