ADVERTISEMENT

ಬೆಂಗಳೂರು: ಆಸ್ಪತ್ರೆಯಿಂದ ಕೋವಿಡ್‌ ರೋಗಿ ನಾಪತ್ತೆ

ಪೊಲೀಸರಿಗೆ ದೂರು: ಎಫ್‌ಐಆರ್‌ ದಾಖಲು:, ಮನೆಯಲ್ಲಿ ಪ್ರತ್ಯೇಕ ವಾಸ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 19:07 IST
Last Updated 7 ಜನವರಿ 2022, 19:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ದೃಢಪಟ್ಟಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಪುತ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ತಾಲ್ಲೂಕಿನ ಖಾಸಗಿ ಆಸ್ಪತ್ರೆಯಿಂದ ಆಶ್ಚರ್ಯಕರ ರೀತಿಯಲ್ಲಿ ಪರಾರಿಯಾಗಿದ್ದಾರೆ.

ಆದಿತ್ಯ ವಿರ್ವಾಣಿ (28) ಪರಾರಿಯಾಗಿದ್ದು, ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಕೋವಿಡ್‌–19 ಸೋಂಕಿನಿಂದ ಗುಣಮುಖರಾಗುವವರೆಗೂ ಮನೆಯಲ್ಲೇ ಪ್ರತ್ಯೇಕವಾಗಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದಿತ್ಯ ತಿಳಿಸಿದ್ದಾರೆ.

ಜನವರಿ 3ರಂದು ಬ್ರಿಟನ್‌ನಿಂದ ಬಂದಿದ್ದ ಇವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್‌ ದೃಢಪಟ್ಟಿತ್ತು. ಅದೇ ದಿನ ಅವರನ್ನು ದೊಡ್ಡಬಳ್ಳಾಪುರದ ಮಣಿಪಾಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಪೊಲೀಸ್‌ ಮತ್ತು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ಆದರೆ, ಅಂದೇ ಮಧ್ಯಾಹ್ನ 11.55 ಮತ್ತು 12 ಗಂಟೆ ನಡುವೆ, ಯಾರಿಗೂ ಗೊತ್ತಾಗದಂತೆ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ದೊಡ್ಡಬಳ್ಳಾಪುರ ಪೊಲೀಸರಿಗೆ ಜ.4ರಂದು ಆಸ್ಪತ್ರೆಯಿಂದ ದೂರು ಸಲ್ಲಿಸಲಾಗಿದ್ದು, ಎಫ್‌ಐಆರ್‌ ದಾಖಲಾಗಿದೆ.

‘ಶುಕ್ರವಾರ ಬೆಳಿಗ್ಗೆವರೆಗೂ ನಾವು ರೋಗಿ ಪತ್ತೆಗೆ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಆದರೆ, ಕೋವಿಡ್‌ನಿಂದ ಗುಣಮುಖರಾಗುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿ ವಾಸವಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಆದಿತ್ಯ ವಿರ್ವಾಣಿ ತಿಳಿಸಿದ್ದಾರೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಸೋಂಕು ವ್ಯಕ್ತಿ ಗುಣಮುಖರಾಗುವವರೆಗೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಗುಣಮುಖರಾದ ಬಳಿಕ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಗತ್ಯ ಕಾನೂನು ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

‘ಕೋವಿಡ್‌ ಇದ್ದ ಕಾರಣ ಆದಿತ್ಯ ಅವರನ್ನು ಯಾರೂ ತಡೆಯುವ ಪ್ರಯತ್ನವನ್ನು ಮಾಡಲಿಲ್ಲ’ ಎಂದು ಮೂಲಗಳು ತಿಳಿಸಿವೆ.

‘ಆದಿತ್ಯ ವಿರ್ವಾಣಿ ಆಸ್ಪತ್ರೆಗೆ ಮರಳುವುದಾಗಿ ಭರವಸೆ ನೀಡಿದ್ದರು. ಆದರೆ, ವಾಪಸ್‌ ಬರಲಿಲ್ಲ. ಆರೋಗ್ಯ ಮತ್ತು ಇತರ ಇಲಾಖೆ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿದ್ದ ಅವರು ಮನೆಯಲ್ಲಿರುವುದಾಗಿ ತಿಳಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಉತ್ತರ ತಾಲ್ಲೂಕಿನ ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಆದಿತ್ಯಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುವ ಮಾರ್ಗಸೂಚಿಗಳನ್ನು ಪಾಲಿಸುವ ಬಗ್ಗೆ ಸಲಹೆಗಳನ್ನು ನೀಡಿದ್ದು, ಮನೆ ಬಾಗಿಲಿಗೆ ಕ್ವಾರಂಟೈನ್‌ನ ನೋಟಿಸ್‌ ಅನ್ನು ಸಹ ಅಂಟಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.