ADVERTISEMENT

ಕೋವಿಡ್: ಆರ್‌ಟಿ–ಪಿಸಿಆರ್ ಪರೀಕ್ಷೆಗೆ ₹ 500 ನಿಗದಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 9:59 IST
Last Updated 9 ಡಿಸೆಂಬರ್ 2020, 9:59 IST
ಕೊರೊನಾ ವೈರಸ್ ಸೋಂಕು ಪರೀಕ್ಷೆ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್ ಸೋಂಕು ಪರೀಕ್ಷೆ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸುವ ವಿವಿಧ ಮಾದರಿಯ ಕೋವಿಡ್ ಪರೀಕ್ಷೆಗಳ ದರವನ್ನು ಪರಿಷ್ಕರಣೆ ಮಾಡಲಾಗಿದ್ದು,ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಸರ್ಕಾರವು ಖಾಸಗಿ ಪ್ರಯೋಗಾಲಯಗಳಿಗೆ ರವಾನಿಸುವ ಪ್ರತಿ ಮಾದರಿಗೆ ₹ 500 ನಿಗದಿಪಡಿಸಲಾಗಿದೆ.

ಈ ಸಂಬಂಧ ಸರ್ಕಾರವು ಆದೇಶ ಹೊರಡಿಸಿದೆ. ‘ಕೋವಿಡ್ ಪರೀಕ್ಷೆಗಳನ್ನು ನಡೆಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಹಾಗೂ ಇತರ ಅಗತ್ಯ ವಸ್ತುಗಳ ದರಗಳು ಕಡಿಮೆಯಾಗಿವೆ. ಹಾಗಾಗಿ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಜತೆಗೆ ಚರ್ಚಿಸಿ, ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸುವ ಪರೀಕ್ಷೆಗಳ ದರವನ್ನು ಇಳಿಕೆ ಮಾಡಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನಿಂದ (ಐಸಿಎಂಆರ್) ಮಾನ್ಯತೆ ಪಡೆದ ರಾಜ್ಯದ ಪ್ರಯೋಗಾಲಯಗಳಿಗೆ ಮಾತ್ರ ನೂತನ ದರ ಅನ್ವಯವಾಗುತ್ತದೆ. ತಪಾಸಣೆ ಹಾಗೂ ದೃಢಪಡಿಸುವ ಪರೀಕ್ಷೆಗಳ ಶುಲ್ಕ ಹಾಗೂ ಪಿಪಿಇ ಕಿಟ್‌ ವೆಚ್ಚ ಕೂಡ ನಿಗದಿತ ದರದಲ್ಲಿಯೇ ಸೇರಿರಲಿದ್ದು, ಹೆಚ್ಚುವರಿ ಶುಲ್ಕವನ್ನು ವಿಧಿಸುವಂತಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವ್ಯಕ್ತಿಯು ನೇರವಾಗಿ ಖಾಸಗಿ ಪ್ರಯೋಗಾಲಯಕ್ಕೆ ತೆರಳಿ ಮಾಡಿಸಿಕೊಳ್ಳುವ ಆರ್‌ಟಿ–ಪಿಸಿಆರ್ ಪರೀಕ್ಷೆಯ ಶುಲ್ಕವನ್ನು ₹ 800ಕ್ಕೆ ಇಳಿಕೆ ಮಾಡಲಾಗಿದೆ. ಈ ಮೊದಲು ಸರ್ಕಾರವು ಖಾಸಗಿ ಪ್ರಯೋಗಾಲಯಗಳಿಗೆ ಆರ್‌ಟಿ–ಪಿಸಿಆರ್ ಪರೀಕ್ಷೆಗೆ ರವಾನಿಸುವ ಪ್ರತಿ ಮಾದರಿಯ ಪರೀಕ್ಷೆಗೆ ₹ 800, ವ್ಯಕ್ತಿ ನೇರವಾಗಿ ಪ್ರಯೋಗಾಲಯಗಳಿಗೆ ತೆರಳಿ ಮಾಡಿಸಿಕೊಳ್ಳುವ ಪರೀಕ್ಷೆಗೆ ₹ 1,200 ಪಾವತಿಸಬೇಕಾಗಿತ್ತು.

ADVERTISEMENT

ಟ್ರೂ ನ್ಯಾಟ್ ಪರೀಕ್ಷೆಗೆ ₹ 1,250
ಸರ್ಕಾರವು ಟ್ರೂ ನ್ಯಾಟ್ ಪರೀಕ್ಷೆಯ ದರವನ್ನೂ ಇಳಿಕೆ ಮಾಡಿದೆ. ಈ ಮೊದಲು ವ್ಯಕ್ತಿಯು ಖಾಸಗಿ ಆಸ್ಪತ್ರೆಗೆ ತೆರಳಿ, ಈ ಮಾದರಿಯ ಪರೀಕ್ಷೆ ಮಾಡಿಸಿಕೊಂಡಲ್ಲಿ ₹ 2,220 ಪಾವತಿಸಬೇಕಾಗಿತ್ತು. ಈಗ ಆ ದರವು ₹ 1,250ಕ್ಕೆ ಇಳಿಕೆಯಾಗಿದೆ. ಅದೇ ರೀತಿ, ₹ 3,800 ಪಾವತಿಸಬೇಕಾಗಿದ್ದ ಸಿಬಿ ನ್ಯಾಟ್ ಪರೀಕ್ಷೆಯ ದರವನ್ನು ₹ 2,400ಕ್ಕೆ ನಿಗದಿಪಡಿಸಲಾಗಿದೆ.

ಖಾಸಗಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳಲ್ಲಿ ನಡೆಸುವ ರ್‍ಯಾಪಿಟ್ ಆ್ಯಂಟಿಬಾಡಿ ಪರೀಕ್ಷೆಗೆ ₹ 500 ಹಾಗೂ ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ₹ 400 ನಿಗದಿಪಡಿಸಲಾಗಿದೆ. ಈ ಎಲ್ಲ ಮಾದರಿಯ ಪರೀಕ್ಷೆಗಳಿಗೆ ಮಾದರಿಗಳನ್ನು ಮನೆಯಿಂದ ಸಂಗ್ರಹಿಸಬೇಕಾದಲ್ಲಿ ಒಂದು ಮನೆಯ ಸಂಗ್ರಹಣಾ ಶುಲ್ಕವು ₹ 400 ಮೀರಬಾರದು ಎಂದು ಆದೇಶ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.