ADVERTISEMENT

ಕೋವಿಡ್‌: ಹಾವೇರಿ, ವಿಜಯಪುರದಲ್ಲಿ ಮಕ್ಕಳಿಗೆ ವಿಶೇಷ ವಾರ್ಡ್‌

ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಜಿಲ್ಲಾಡಳಿತದ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 18:07 IST
Last Updated 21 ಜನವರಿ 2022, 18:07 IST
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ‘ಮಕ್ಕಳ ಕೋವಿಡ್‌ ವಾರ್ಡ್‌’ ಅನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದೆ –ಪ್ರಜಾವಾಣಿ ಚಿತ್ರ
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ‘ಮಕ್ಕಳ ಕೋವಿಡ್‌ ವಾರ್ಡ್‌’ ಅನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋವಿಡ್‌ ಸೋಂಕಿತರಾಗುವ ಮಕ್ಕಳ ಆರೈಕೆಗಾಗಿ ಹಾವೇರಿ ಹಾಗೂ ವಿಜಯಪುರದಲ್ಲಿ ವಿಶೇಷ ವಾರ್ಡ್‌ ನಿರ್ಮಿಸಿದ್ದಲ್ಲದೇ, ಮಕ್ಕಳಲ್ಲಿ ಚೈತನ್ಯ ಹೊಮ್ಮಿಸುವ ರೀತಿಯಲ್ಲಿ ಆಕರ್ಷಕವಾಗಿ ರೂಪಿಸಲಾಗಿದೆ.

ಕೋವಿಡ್‌ನಿಂದ ಸಂಭಾವ್ಯ ಭೀತಿ ಹೋಗಲಾಡಿಸಿ, ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಲು ವಾರ್ಡ್‌ನ ಗೋಡೆಗಳ ಮೇಲೆ ವರ್ಣರಂಜಿತ ಚಿತ್ರಗಳನ್ನು ಬಿಡಿಸಲಾಗಿದೆ. ಮಕ್ಕಳ ಮನಸೆಳೆಯುವ ಮಿಕ್ಕಿಮೌಸ್‌, ಡೊನಾಲ್ಡ್‌ ಡಕ್‌ ಸೇರಿದಂತೆ ವಿವಿಧ ಕಾರ್ಟೂನ್‌ಗಳನ್ನು ಕಲಾವಿದರು ಅರಳಿಸಿದ್ದಾರೆ. ಆಟವಾಡಲು ಮಕ್ಕಳ ಆಟಿಕೆಗಳನ್ನೂ ಇರಿಸಲಾಗಿದೆ.

ಚಿಕಿತ್ಸೆ ಕೊಡಿಸಲು ಮಕ್ಕಳ ಕೋವಿಡ್‌ ವಾರ್ಡ್‌ನಲ್ಲಿ ಕಾರ್ಯನಿರ್ವಹಿಸುವ ನರ್ಸಿಂಗ್ ಆಫೀಸರ್‌ಗಳಿಗೆ ಕೌಶಲಯುಕ್ತ ತರಬೇತಿ ನೀಡಲಾಗಿದೆ.

ADVERTISEMENT

ಹಾವೇರಿ ಜಿಲ್ಲಾಸ್ಪತ್ರೆಯ 30 ಹಾಸಿಗೆಗಳನ್ನೊಳಗೊಂಡ ಮಕ್ಕಳ ಕೋವಿಡ್‌ ವಾರ್ಡ್‌ನಲ್ಲಿ ಐಸಿಯು ವೆಂಟಿಲೇಟರ್‌, ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌, ನಿಯೋನಾಟಲ್‌ ಮಾನಿಟರ್‌, ಸಿರಿಂಜ್‌ ಇನ್‌ಫ್ಯೂಷನ್‌ ಪಂಪ್‌, ನಾನ್‌ ರೀಬ್ರೀತರ್‌ ಮಾಸ್ಕ್‌, ಅಂಬು ಬ್ಯಾಗ್‌ ಸೇರಿದಂತೆ ಎಲ್ಲ ವೈದ್ಯಕೀಯ ಉಪಕರಣಗಳನ್ನು ವ್ಯವಸ್ಥಿತವಾಗಿ ಜೋಡಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ಸೌಲಭ್ಯಗಳ ಕೊರತೆಗಳಿವೆ. ಶೃಂಗೇರಿ, ಕೊಪ್ಪ ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞರು ಇಲ್ಲ.

ಉಡುಪಿ ಜಿಲ್ಲೆಯಾದ್ಯಂತ ‘ವಾತ್ಯಲ್ಯ’ ಕಾರ್ಯಕ್ರಮದಡಿ 1.75 ಲಕ್ಷ ಮಕ್ಕಳ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದೆ. ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಕ್ಕಳನ್ನು ಗುರುತಿಸಿ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪೌಷ್ಟಿಕ ಆಹಾರ ಒದಗಿಸಲಾಗಿದೆ ಎಂದು ಡಿಎಚ್‌ಒ ನಾಗಭೂಷಣ ಉಡುಪ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ‌ಕಳೆದ ಒಂದು ತಿಂಗಳಲ್ಲಿ 18 ವರ್ಷಕ್ಕಿಂತ ಕಡಿಮೆ ಇರುವ 703 ಮಕ್ಕಳಿಗೆ ಕೋವಿಡ್ಸೋಂಕು ದೃಢಪಟ್ಟಿದೆ. ಪ್ರಸ್ತುತ 25 ಮಕ್ಕಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮಕ್ಕಳಿಗಾಗಿ ಯಾವುದೇ ವಿಶೇಷ ಅನುದಾನ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ 13 ಮಕ್ಕಳ ವೈದ್ಯರಿದ್ದಾರೆ. ಕೋವಿಡ್‌ 3ನೇ ಅಲೆಯ ನಿರ್ವಹಣೆಗಾಗಿ ಪ್ರತ್ಯೇಕ ಅನುದಾನ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಚಿಕಿತ್ಸೆಗಾಗಿ 30 ಕಿ.ಮೀ. ತೆರಳಬೇಕು’

ರಾಯಚೂರು: ಜಿಲ್ಲೆಯ ಎರಡು ಹೊಸ ತಾಲ್ಲೂಕು ಕೇಂದ್ರಗಳಲ್ಲಿ ಅನಾರೋಗ್ಯದಿಂದ ಬಳಲುವ ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಸಮಸ್ಯೆಯೂ ವಿಪರೀತವಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಮಕ್ಕಳ ತಜ್ಞರಿಲ್ಲದ ಸಿರವಾರ ಹಾಗೂ ಮಸ್ಕಿ ತಾಲ್ಲೂಕು ಕೇಂದ್ರಗಳ ಜನರು ಆಸ್ಪತ್ರೆಗೆ ತಲುಪುವುದಕ್ಕಾಗಿಯೇ ಅತಿ ಹೆಚ್ಚು ವೆಚ್ಚ ಮಾಡುವ ಸ್ಥಿತಿ ಈಗಲೂ ಇದೆ. ಮಸ್ಕಿ ವಿಧಾನಸಭೆ ಕ್ಷೇತ್ರವಾಗಿ 15 ವರ್ಷಗಳಾದರೂ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿಯಾಗಲಿ, ಖಾಸಗಿಯಾಗಲಿ ಮಕ್ಕಳ ತಜ್ಞರನ್ನು ಹೊಂದುವುದಕ್ಕೆ ಸಾಧ್ಯವಾಗಿಲ್ಲ. ದಿಢೀರ್‌ ಆನಾರೋಗ್ಯದಿಂದ ಬಳಲುವ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಕನಿಷ್ಠ 30 ಕಿಮೀ ದೂರದ ಸಿಂಧನೂರು ಅಥವಾ ಲಿಂಗಸುಗೂರು ಪಟ್ಟಣಕ್ಕೆ ಧಾವಿಸುವ ಅನಿವಾರ್ಯತೆ ಇದೆ.
ಲಿಂಗಸುಗೂರು ತಾಲ್ಲೂಕು ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ವಾರ್ಡ್‌ ಮೀಸಲಾಗಿದೆ. ಆದರೆ, ಕಾಯಂ ಮಕ್ಕಳ ತಜ್ಞರಿಲ್ಲ. ಬೇರೆ ಕಡೆಯ ವೈದ್ಯರು ವಾರದಲ್ಲಿ ಮೂರು ದಿನ ಇಲ್ಲಿಗೆ ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.