ADVERTISEMENT

15.6 ದಿನಗಳು ಚಿಕಿತ್ಸೆ ಪಡೆದ ಕೋವಿಡ್ ಪೀಡಿತರು

ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಕೊರೊನಾ ಸೋಂಕಿತರು * ಮೃತ ವ್ಯಕ್ತಿಗಳಿಗೆ ಆಸ್ಪತ್ರೆಯಲ್ಲಿ 4.4 ದಿನಗಳು ಮಾತ್ರ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 19:58 IST
Last Updated 3 ಜೂನ್ 2020, 19:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲಿಯೇ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳುವವರ ಸಂಖ್ಯೆ ಕೂಡ ಅಧಿಕವಾಗಿದೆ. ಈವರೆಗೆ ಗುಣಮುಖರಾದವರಲ್ಲಿ ಪ್ರತಿ ವ್ಯಕ್ತಿ ಸರಾಸರಿ 15.6 ದಿನಗಳನ್ನು ಆಸ್ಪತ್ರೆಗಳಲ್ಲಿ ಕಳೆದಿದ್ದಾರೆ.

ಕರ್ನಾಟಕ ರಾಜ್ಯ ಕೋವಿಡ್‌–19 ವಾರ್‌ ರೂಮ್‌ ಚೇತರಿಸಿಕೊಂಡವರನ್ನು ವಿಶ್ಲೇಷಣೆ ಮಾಡಿದೆ.ಈ ಮೊದಲು ವ್ಯಕ್ತಿ ಬೇಗ ಚೇತರಿಸಿಕೊಂಡರೂ ನಿಯಮದ ಪ್ರಕಾರ ಆಸ್ಪತ್ರೆಯಲ್ಲಿಯೇ 14 ದಿನಗಳನ್ನ ಇರಿಸಿಕೊಳ್ಳಲಾಗುತ್ತಿತ್ತು. ಮಕ್ಕಳು ಹಾಗೂ ಯುವಕರು ಪೂರಕ ಚಿಕಿತ್ಸೆಗೆ ಬೇಗ ಗುಣಮುಖರಾಗುತ್ತಿದ್ದಾರೆ. 60 ವರ್ಷ ಮೇಲ್ಪಟ್ಟವರು ಹಾಗೂ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಕಾಯಿಲೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮಾತ್ರ ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದು, ಕೆಲವರು 20 ದಿನಗಳಿಗೂ ಅಧಿಕ ಅವಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈವರೆಗೆ 1,400ಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ.

ಚೇತರಿಸಿಕೊಂಡವರನ್ನು ಅನಗತ್ಯವಾಗಿ ಹೆಚ್ಚಿನ ದಿನಗಳು ಆಸ್ಪತ್ರೆಗಳಲ್ಲಿ ಉಳಿಸಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿರುವ ಆರೋಗ್ಯ ಇಲಾಖೆ, 14 ದಿನಗಳ ಬದಲು 10 ದಿನಗಳಿಗೇ ಆಸ್ಪತ್ರೆಯಿಂದ ಮನೆಗೆ ತೆರಳಲು ಅವಕಾಶ ನೀಡಿದೆ. ಕೆಲವರು ಏಳನೆ ದಿನಕ್ಕೇ ಮನೆಗೆ ತೆರಳಿದ ಉದಾಹರಣೆಗಳಿವೆ. ಈ ಅವಧಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಸದ್ಯ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಶೇ 37 ರಷ್ಟು ಮಂದಿ ಚೇತರಿಸಿಕೊಂಡಿದ್ದಾರೆ.

ADVERTISEMENT

4.4 ದಿನಗಳು: ರಾಜ್ಯದಲ್ಲಿ ಕೊರೊನಾ ಸೋಂಕಿನಿಂದಾಗಿ 52 ಮಂದಿ (ಜೂ.2) ಮೃತಪಟ್ಟಿದ್ದಾರೆ. ಅದರಲ್ಲಿ ಬಹುತೇಕರು ತೀವ್ರ ನಿಗಾ ಘಟಕದಲ್ಲಿ ಇದ್ದವರಾಗಿದ್ದಾರೆ. ಈವರೆಗೆ ಮೃತಪಟ್ಟವರಲ್ಲಿ ಪ್ರತಿ ವ್ಯಕ್ತಿ ಸರಾಸರಿ 4.4 ದಿನಗಳು ಮಾತ್ರ ಆಸ್ಪತ್ರೆಯಲ್ಲಿ ಕಳೆದಿದ್ದಾರೆ.

‘ಕೋವಿಡ್‌ ಸಾಂಕ್ರಾಮಿಕ ರೋಗವಾಗಿದ್ದು, ವ್ಯಕ್ತಿಯಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಗುಣಪಡಿಸಬಹುದಾಗಿದೆ. ಅನಗತ್ಯವಾಗಿ ಆತಂಕಕ್ಕೆ ಒಳಗಾಗಿ, ಇನ್ನಷ್ಟು ಸಮಸ್ಯೆ ಸೃಷ್ಟಿಸಿಕೊಳ್ಳಬಾರದು. ಬದಲಾಗಿ ಮುಂಜಾಗರೂಕ ಕ್ರಮಗಳನ್ನು ಅನುಸರಿಸುವುದು ಸೂಕ್ತ. ಪೌಷ್ಟಿಕ ಆಹಾರ ಸೇವಿಸಿ, ಬಿಸಿ ನೀರನ್ನು ಕುಡಿಯಬೇಕು’ ಎಂದು ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅನ್ಸರ್ ಅಹಮದ್ ತಿಳಿಸಿದರು.

ಮೃತರಲ್ಲಿ ಶೇ 99 ರಷ್ಟು ಮಂದಿಗೆ ಕಾಯಿಲೆ
ಕೊರೊನಾ ಸೋಂಕಿಗೆ ಮೃತಪಟ್ಟವರಲ್ಲಿ ಬಹುತೇಕರು 50 ವರ್ಷ ಮೇಲ್ಪಟ್ಟವರಾಗಿದ್ದಾರೆ. ಮಧುಮೇಹ, ರಕ್ತದೊತ್ತಡ, ಹೃದಯ ಕಾಯಿಲೆ, ಮೂತ್ರಪಿಂಡ ಸಮಸ್ಯೆ, ಪಾರ್ಶವಾಯು, ಬಹು ಅಂಗಾಂಗ ವೈಫಲ್ಯ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಪರಿಣಾಮ ಸೋಂಕು ಅವರ ಜೀವಕ್ಕೆ ಕುತ್ತಾಗಿ ಪರಿಣಮಿಸಿತು. ಮೃತಪಟ್ಟವರಲ್ಲಿ ಶೇ 99ರಷ್ಟು ಮಂದಿ ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಿದ್ದವರೇ ಆಗಿದ್ದಾರೆ. ಕೆಲವರಲ್ಲಿ ಜ್ವರ ನ್ಯುಮೋನಿಯಾಕ್ಕೆ ಪರಿವರ್ತನೆಯಾಗಿ, ಉಸಿರಾಟದ ಸಮಸ್ಯೆಗಳು ಕಾಣಿಸಿಕೊಂಡಿದೆ. ಇದರಿಂದಾಗಿ ಹೃದಯಾಘಾತವಾಗಿದೆ. ಮೂತ್ರಪಿಂಡ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿಯೂ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.