ADVERTISEMENT

ಕೋವಿಡ್ ಲಸಿಕೆ; ಬೀದರ್, ಕಲಬುರ್ಗಿ ಕಳಪೆ ಸಾಧನೆ

ಕೋವಿಡ್ ಲಸಿಕೆ; ಗುರಿಗಿಂತ ಶೇ 50 ಸಾಧನೆ ಮಾಡಿದ ಮೂರು ಜಿಲ್ಲೆಗಳು

ಮನೋಜ ಕುಮಾರ್ ಗುದ್ದಿ
Published 30 ಮಾರ್ಚ್ 2021, 19:44 IST
Last Updated 30 ಮಾರ್ಚ್ 2021, 19:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ಕೋವಿಡ್‌ಲಸಿಕೆ ನೀಡುವ ವಿಚಾರದಲ್ಲಿ ಕಲ್ಯಾಣ ಕರ್ನಾಟಕದ ಎರಡು ಜಿಲ್ಲೆಗಳು ಕಳಪೆ ಸಾಧನೆ ಮಾಡಿದ್ದು, ಬೀದರ್‌ ಶೇ 31.03 ಹಾಗೂ ಕಲಬುರ್ಗಿ ಶೇ 50ರಷ್ಟು ಮಾತ್ರ ಗುರಿ ತಲುಪಲು ಸಾಧ್ಯವಾಗಿದೆ.

ಇದರಿಂದ ಆತಂಕಗೊಂಡ ಕಲಬುರ್ಗಿ ಜಿಲ್ಲಾಡಳಿತ, ಲಸಿಕೆಗಾಗಿ ಜನರನ್ನು ಸಮೀಪದ ಆರೋಗ್ಯ ಕೇಂದ್ರಗಳಿಗೆ ಕರೆತರಲು ಕೋವಿಡ್‌ ನಿಧಿಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಾಹನ ವ್ಯವಸ್ಥೆ ಮಾಡಿದೆ. ಆದರೆ, ಈ ವಾಹನಗಳಲ್ಲಿ ಬರಲು ಜನ ಹಿಂದೇಟು ಹಾಕುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಕಲಬುರ್ಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ಪಡೆಯಲು 45 ವರ್ಷ ಮೀರಿದ ಜನರನ್ನು ನಗರ ಆರೋಗ್ಯ ಕೇಂದ್ರಗಳತ್ತ ಕರೆ ತರಲು ಆರೋಗ್ಯ ಇಲಾಖೆ ಸಿಬ್ಬಂದಿ, ಪಾಲಿಕೆಯ ಆರೋಗ್ಯ ಘಟಕದ ಸಿಬ್ಬಂದಿ ಅಷ್ಟೇ ಅಲ್ಲದೇ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ (ಎನ್‌ಎಸ್‌ಎಸ್‌)ಯ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ.

ADVERTISEMENT

‘ಕಲಬುರ್ಗಿ ಹಾಗೂ ಬೀದರ್‌ ಜಿಲ್ಲೆಗಳಲ್ಲಿ ಕೋವಿಡ್ ಎರಡನೇ ಅಲೆ ಶುರುವಾಗಿದ್ದು, ನಿತ್ಯ ಸರಾಸರಿ ಎರಡೂ ಜಿಲ್ಲೆಗಳಲ್ಲಿ 150ರಿಂದ 200 ಪ್ರಕರಣಗಳು ವರದಿಯಾಗುತ್ತಿವೆ. ಒಂದು ಆಸ್ಪತ್ರೆಗೆ ನಿತ್ಯ ಒಳರೋಗಿಗಳಾಗಿ ದಾಖಲಾಗುವ ನಾಲ್ವರಲ್ಲಿ ಮೂವರಿಗೆ ಕೋವಿಡ್‌ ಸೋಂಕು ಕಾಣಿಸಿಕೊಳ್ಳುತ್ತಿದೆ’ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಕಲಬುರ್ಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಶೇಖರ ಮಾಲಿ, ‘1.97 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 135 ಕಡೆ ಲಸಿಕಾ ಕೇಂದ್ರಗಳನ್ನು ತೆರೆದಿದ್ದೇವೆ. ಏಪ್ರಿಲ್ 1ರಿಂದ ಉಪ ಆರೋಗ್ಯ ಕೇಂದ್ರಗಳಲ್ಲಿಯೂ ಲಸಿಕೆ ದೊರೆಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.