ADVERTISEMENT

ಕೋವಿಡ್ ಲಸಿಕೆ: 2ನೇ ಡೋಸ್ ಶೇ 85 ಸಾಧನೆ

ಮೊದಲ ಡೋಸ್ ವಿತರಣೆಯಲ್ಲಿ ಗುರಿ ತಲುಪಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 15:13 IST
Last Updated 23 ಜನವರಿ 2022, 15:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ 18 ವರ್ಷಗಳು ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ವಿತರಣೆಯಲ್ಲಿ ಶೇ 100 ರಷ್ಟು ಗುರಿ ಸಾಧನೆಯಾಗಿದೆ. ಮೊದಲ ಡೋಸ್ ಪಡೆದವರಲ್ಲಿ ಶೇ 85 ರಷ್ಟು ಮಂದಿ ಎರಡನೆ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.

2021ರ ಜ.16 ರಿಂದರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಿಸಲಾಗುತ್ತಿದೆ. 4.89 ಕೋಟಿ ಮಂದಿ 18 ವರ್ಷಗಳು ಮೇಲ್ಪಟ್ಟವರೆಂದು ಲೆಕ್ಕ ಹಾಕಲಾಗಿತ್ತು. ಅಷ್ಟು ಮಂದಿಗೆ ಈಗ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ. ಅವರಲ್ಲಿ 4.17 ಕೋಟಿ ಮಂದಿ ಎರಡನೇ ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

‘ಒಂದು ವರ್ಷದ ಏಳು ದಿನಗಳಲ್ಲಿ ಮೊದಲ ಡೋಸ್ ವಿತರಣೆಯ ಶೇ 100 ರಷ್ಟು ಸಾಧನೆ ಮಾಡಲಾಗಿದೆ. ಈ ಸಾಧನೆ ಮಾಡಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ಅದ್ಬುತ ಸಾಧನೆಗಾಗಿ ಎಲ್ಲ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆಗಳು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ADVERTISEMENT

‘ಎಲ್ಲ ಮಕ್ಕಳಿಗೆ ಲಸಿಕೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಆದಷ್ಟು ಬೇಗ ಎಲ್ಲ 15ರಿಂದ 18 ವರ್ಷದೊಳಗಿನವರಿಗೂ ಲಸಿಕೆ ನೀಡಲಾಗುವುದು. ಕೋವಿಡ್ ತಡೆಗೆ ಲಸಿಕೆ ಸಹಕಾರಿ’ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಜನವರಿಯಲ್ಲಿ ಲಸಿಕೆ ವಿತರಣೆ ಪ್ರಾರಂಭವಾದರೂ, ದೈನಂದಿನ ಸರಾಸರಿ ಮಾರ್ಚ್‌ ತಿಂಗಳ ನಂತರ ಲಕ್ಷದ ಗಡಿ ದಾಟಿತ್ತು. ಬಳಿಕ ಲಸಿಕೆ ವಿತರಣೆ ಏರುಗತಿ ಪಡೆದುಕೊಂಡಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 4.83 ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು ವಿತರಿಸಲಾಗಿತ್ತು. ಈಗ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ 7 ಸಾವಿರಕ್ಕೂ ಅಧಿಕ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಈ ತಿಂಗಳು ಪ್ರತಿನಿತ್ಯ ಸರಾಸರಿ 3.17 ಲಕ್ಷದಷ್ಟು ಡೋಸ್‌ಗಳನ್ನು ವಿತರಿಸಲಾಗಿದೆ.

17 ಜಿಲ್ಲೆಗಳು ಉತ್ತಮ ಸಾಧನೆ

ಕೋವಿಡ್ ಲಸಿಕೆಯ ಮೊದಲ ಡೋಸ್ ವಿತರಣೆಯಲ್ಲಿ 18 ಜಿಲ್ಲೆಗಳು ಶೇ 100 ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಧನೆ ಮಾಡಿವೆ. ಗದಗ, ಬೀದರ್ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ನಿಗದಿಪಡಿಸಿದ ಗುರಿಗಿಂತ ಹೆಚ್ಚಿನ ಜನರಿಗೆ ಲಸಿಕೆ ನೀಡಲಾಗಿದೆ. ಮಂಡ್ಯ, ಬೆಂಗಳೂರು ಗ್ರಾಮಾಂತರ, ಉಡುಪಿ, ದಕ್ಷಿಣ ಕನ್ನಡ, ರಾಯಚೂರು, ಬೆಂಗಳೂರು, ಕಲಬುರಗಿ, ಯಾದಗಿರಿ, ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆ ಶೇ 100 ರಷ್ಟು ಗುರಿ ಸಾಧಿಸಿಲ್ಲ.

ಎರಡನೇ ಡೋಸ್ ವಿತರಣೆಯಲ್ಲಿ ಕೊಡಗು, ವಿಜಯಪುರ ಸೇರಿದಂತೆ 17 ಜಿಲ್ಲೆಗಳು ರಾಜ್ಯದ ಸರಾಸರಿಗಿಂತ (ಶೇ 85) ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ವಿತರಿಸಿವೆ. ಕಲಬುರಗಿ, ರಾಯಚೂರು, ಯಾದಗಿರಿ, ಚಿತ್ರದುರ್ಗ, ದಕ್ಷಿಣ ಕನ್ನಡ ಸೇರಿದಂತೆ 10 ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ 85ಕ್ಕಿಂತ ಕಡಿಮೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.