ADVERTISEMENT

ಕೋವಿಡ್ ಲಸಿಕೆ: 2ನೇ ಡೋಸ್‌ಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 16:12 IST
Last Updated 6 ಆಗಸ್ಟ್ 2021, 16:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಂಭಾವ್ಯ ಕೋವಿಡ್ 3ನೇ ಅಲೆಯ ಕಾರಣ ರಾಜ್ಯದ ಎಲ್ಲ ಜನರಿಗೆ ರಕ್ಷಣೆ ನೀಡುವುದು ಅತ್ಯವಶ್ಯ. ಹಾಗಾಗಿ, ಜಿಲ್ಲೆಗಳಿಗೆ ಹಂಚಿಕೆಯಾದ ಲಸಿಕೆಯನ್ನು ಪೂರ್ಣಪ್ರಮಾಣದಲ್ಲಿ ಬಳಸಿ, ಎರಡನೇ ಡೋಸ್‌ಗೆ ಆದ್ಯತೆ ನೀಡಬೇಕು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ತಿಳಿಸಿದ್ದಾರೆ.

ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಜನಸಂಖ್ಯೆ ಆಧಾರದಲ್ಲಿ ಜಿಲ್ಲೆಗಳಿಗೆ ಹಂಚಿಕೆಯಾದ ಲಸಿಕೆಯ ಡೋಸ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಮೊದಲ ಡೋಸ್ ಲಸಿಕೆ ಪಡೆದ ಪಲಾನುಭವಿಗಳ ದಿನವಾರು ಲಸಿಕಾಕರಣದ ಸಂಖ್ಯೆಯ ಆಧಾರದ ಮೇಲೆ ಎರಡನೇ ಡೋಸ್‌ನ ದಿನಾಂಕವನ್ನು ಪೂರ್ವ ನಿರ್ಧರಿಸಬೇಕು. ಕೋವಿನ್ ಪೋರ್ಟಲ್‌ನಲ್ಲಿ ಎರಡನೇ ಡೋಸ್ ಲಸಿಕೆ ವಿತರಣೆಗೆ ಪ್ರತ್ಯೇಕ ಅವಧಿಯನ್ನು ನಿಗದಿಪಡಿಸಲು ಅವಕಾಶ ಕಲ್ಪಿಸಬೇಕು’ ಎಂದು ಹೇಳಿದ್ದಾರೆ.

ADVERTISEMENT

ಕೋವ್ಯಾಕ್ಸಿನ್ 2ನೇ ಡೋಸ್ ಮಾತ್ರ:

‘ಹಂಚಿಕೆಯಾದ ‘ಕೋವಿಶೀಲ್ಡ್‌’ ಲಸಿಕೆಯಲ್ಲಿ ಭಾಗಶಃ ಡೋಸ್‌ಗಳನ್ನು ಎರಡನೇ ಡೋಸ್ ವಿತರಣೆಗೆ ಕಾಯ್ದಿರಿಸಬೇಕು. ‘ಕೋವ್ಯಾಕ್ಸಿನ್’ ಲಸಿಕೆಯನ್ನು ಸಂಪೂರ್ಣವಾಗಿ ಎರಡನೇ ಡೋಸ್‌ಗೆ ಬಳಸಬೇಕು. ಲಸಿಕಾ ಕೇಂದ್ರಗಳಲ್ಲಿ ಎರಡನೇ ಡೋಸ್‌ಗಾಗಿಯೇ ಪ್ರತ್ಯೇಕ ದಿನ ಅಥವಾ ಸಮಯ ನಿಗದಿಪಡಿಸಬೇಕು. ಮೊದಲ ಮತ್ತು ಎರಡನೇ ಡೋಸ್‌ ಲಸಿಕೆಗೆ ಫಲಾನುಭವಿಗಳು ಪ್ರತ್ಯೇಕವಾಗಿ ಸಾಲಿನಲ್ಲಿ ನಿಲ್ಲಲು ವ್ಯವಸ್ಥೆ ಮಾಡಬೇಕು’ ಎಂದು ಸೂಚಿಸಿದ್ದಾರೆ.

ರಾಜ್ಯದಲ್ಲಿ ಈವರೆಗೆ 3.22 ಕೋಟಿ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ. 2.51 ಕೋಟಿ ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಅವರಲ್ಲಿ 71.46 ಲಕ್ಷ ಮಂದಿ ಎರಡೂ ಡೋಸ್ ಪೂರ್ಣಗೊಳಿಸಿದ್ದಾರೆ. 3,500ಕ್ಕೂ ಅಧಿಕ ಸರ್ಕಾರಿ ಕೇಂದ್ರಗಳಲ್ಲಿ ಲಸಿಕೆ ವಿತರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.