ADVERTISEMENT

‘ಕೋವಿಡ್‌: ತಪ್ಪು ಮಾಹಿತಿ ಕೊಡುವ ವೈದ್ಯರ ವಿರುದ್ಧ ಕ್ರಮ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 17:32 IST
Last Updated 18 ಜನವರಿ 2022, 17:32 IST
ವೈರಸ್‌–ಪ್ರಾತಿನಿಧಿಕ ಚಿತ್ರ
ವೈರಸ್‌–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕಕೋವಿಡ್‌ ಕುರಿತು ತಪ್ಪು ಮಾಹಿತಿ ಪಸರಿಸುವ ಅಥವಾ ವಾಸ್ತವಕ್ಕೆ ದೂರವಾದ ದತ್ತಾಂಶಗಳನ್ನು ನೀಡುವ ವೈದ್ಯರು ಹಾಗೂ ತಜ್ಞರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

‘ಕೋವಿಡ್‌ ಕುರಿತಾಗಿ ವಿವಿಧ ಮಾಧ್ಯಮಗಳ ಮೂಲಕ ಕೆಲವು ವೈದ್ಯಕೀಯ ಪರಿಣತರು ಹಾಗೂ ವೈದ್ಯರು ಸಾರ್ವಜನಿಕರಿಗೆ ಅಪೂರ್ಣವಾದ, ತಪ್ಪಾದ ಮತ್ತು ಆಧಾರ ರಹಿತ ಮಾಹಿತಿಗಳನ್ನು ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ರೀತಿಯ ತಪ್ಪು ಮಾಹಿತಿಗಳಿಂದಾಗಿ ನಾಗರಿಕರು ಗೊಂದಲಕ್ಕೀಡಾಗಿ ಕೋವಿಡ್‌ ನಿರ್ವಹಣೆಗಾಗಿ ಆರೋಗ್ಯ ಹಾಗೂ ಕಂದಾಯ ಇಲಾಖೆಗಳು ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನೇ ಪಾಲಿಸದಿರುವ ಸಾಧ್ಯತೆ ಹೆಚ್ಚಾಗಬಹುದು’ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

‘ಚಿಕಿತ್ಸೆ ಹಾಗೂ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ ವೈದ್ಯಕೀಯ ಪರಿಣತರು ಹಾಗೂ ವೈದ್ಯರು, ನಾಗರಿಕರಿಗೆ ಕೋವಿಡ್‌ ಕುರಿತು ಮಾಹಿತಿ ನೀಡುವ ವೇಳೆ ಹೆಚ್ಚು ಜಾಗ್ರತೆ ವಹಿಸಬೇಕು. ಯಾವುದೇ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡುವ ಮುನ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹೊರಡಿಸಿರುವ ಸುತ್ತೋಲೆ, ಮಾರ್ಗಸೂಚಿ ಅಥವಾ ಆದೇಶಗಳನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು’ ಎಂದು ಸೂಚಿಸಲಾಗಿದೆ.

ADVERTISEMENT

‘ತಪ್ಪು ಮಾಹಿತಿ ನೀಡಿದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ವಿಪತ್ತು ನಿರ್ವಹಣಾ ಕಾಯ್ದೆ 2005ರ ನಿಯಮ (54) ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ನಿಯಮ 4 (ಕೆ) ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.