ADVERTISEMENT

ಕೋವಿಡ್‌: ಸುಳ್ಳು ಬಿಲ್‌ ಸೃಷ್ಟಿಸುವವರ ವಿರುದ್ಧ ಕ್ರಮ

ವಲಯವಾರು ಪ್ರಗತಿ ಪರಿಶೀಲಿಸಲು ನಿರ್ದೇಶಿಸಿದ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 6:35 IST
Last Updated 15 ಅಕ್ಟೋಬರ್ 2020, 6:35 IST
   

ಬೆಂಗಳೂರು: ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಕೊಡಿಸಲು ಮಧ್ಯವರ್ತಿಗಳು ಹಣ ಪಡೆಯುತ್ತಿರುವುದು ಮತ್ತು ಮನೆಗಳಲ್ಲಿ ಶುಶ್ರೂಷೆ ಪಡೆಯುತ್ತಿರುವವರ ಹೆಸರಲ್ಲಿ ಸುಳ್ಳು ಬಿಲ್‌ಗಳನ್ನು ಸೃಷ್ಟಿಸುತ್ತಿರುವ ಪ್ರಕರಣಗಳ ಬಗ್ಗೆ ಕಟ್ಟುನಿಟ್ಟಾಗಿ ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್- 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಲ️ಯವಾರು ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಜತೆ ವೀಡಿಯೊ ಸಂವಾದದಲ್ಲಿ ಮಾತನಾಡಿ, ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದು ತಕ್ಷಣವೇ ಗಮನಹರಿಸಬೇಕು ಎಂದು ಹೇಳಿದರು.

ಪ್ರಮಾಣೀಕೃತ ಕಾರ್ಯಾಚರಣೆ ವಿಧಾನಗಳ (ಎಸ್.ಒ.ಪಿ) ಪರಿಣಾಮಕಾರಿ ಜಾರಿ ಮತ್ತು ಮಾಹಿತಿ, ಶಿಕ್ಷಣ ಹಾಗೂ ಸಂವಹನ (ಐಇಸಿ) ಚಟುವಟಿಕೆಗಳನ್ನು ವ್ಯಾಪಕಗೊಳಿಸುವ ಮೂಲ️ಕ ಕೋವಿಡ್ 19 ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂದು ಹೇಳಿದರು.

ADVERTISEMENT

ಮನೆಗಳಲ್ಲಿ ಕ್ವಾರಂಟೈನ್‌ ಇರುವವರ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕು. ಟೆಲಿಮಾನಿ
ಟರಿಂಗ್‌ ಮೂಲಕ ನಿರಂತರ ನಿಗಾವಹಿಸುವುದು ಅತಿ ಮುಖ್ಯ. ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗಳನ್ನು ಕಡಿಮೆ ಮಾಡಿ ಆರ್‌ಟಿಪಿಸಿಆರ್‌ ಪರೀಕ್ಷೆ ಹೆಚ್ಚು ಮಾಡಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಯಡಿಯೂರಪ್ಪ ಹೇಳಿದರು.

ಹಬ್ಬಗಳು ಆರಂಭವಾಗುತ್ತಿರುವುದರಿಂದ ಮಾಸ್ಕ್‌ ಹಾಕಿಕೊಳ್ಳುವುದು, ಅಂತರ ಕಾಪಾಡುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ಇದಕ್ಕೆ ಪೊಲೀಸರು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಕೋವಿಡ್– 19 ಕುರಿತ ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ಹೆಚ್ಚು ಮಾಡಬೇಕಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೂಚಿಸಿದರು. ಆಸ್ಪತ್ರೆಯಿಂದ ಮನೆಗೆ ಮರಳುವವರಲ್ಲಿ ಪುನಃ ಸೋಂಕು ಕಾಣಿಸಿಕೊಂಡಿರುವ ಪ್ರಕರಣಗಳೂ ಇರುವುದರಿಂದ ಅವರ ಮೇಲೆ ಹೆಚ್ಚಿನ ನಿಗಾವಹಿಸಬೇಕಾಗಿದೆ ಎಂದರು.

ಸೋಂಕಿತರ ವಿಳಾಸಗಳು ತಪ್ಪಾಗಿರುವುದು ಮತ್ತು ಮೊಬೈಲ್‌ ಸಂಖ್ಯೆಗಳು ಸ್ವಿಚ್‌ ಆಫ್‌ ಆಗಿರುವುದರಿಂದ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.