ADVERTISEMENT

ಲಸಿಕೆ ಯಾವ ಜಾತಿಗೂ ಸೀಮಿತವಾಗಿಲ್ಲ: ಬಿ.ಶ್ರೀರಾಮುಲು

ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 15:06 IST
Last Updated 3 ಜೂನ್ 2021, 15:06 IST
ಬಿ.ಶ್ರೀರಾಮುಲು
ಬಿ.ಶ್ರೀರಾಮುಲು   

ಚಿತ್ರದುರ್ಗ: ‘ಲಸಿಕೆ ಹಾಕುವ ವಿಚಾರದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿ ಯಾವುದೇ ಧರ್ಮ–ಜಾತಿಗೆ ಸೇರಿರಲಿ ನಿಗದಿತ ವಯೋಮಿತಿಯವರಿಗೆ ಹಾಕುವ ಕೆಲಸ ನಡೆಯುತ್ತಿದೆ. ಜನರ ಜೀವದ ಜತೆ ರಾಜಕೀಯ ಮಾಡುವುದು ಸಲ್ಲದು’ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಹತಾಶೆಯಲ್ಲಿದೆ. ಜನರನ್ನು ಮರುಳು ಮಾಡಿ ಬಿಜೆಪಿಗೆ ಮಸಿ ಬಳಿಯಲು ಯತ್ನಿಸುತ್ತಿದೆ. ಪರಿಶಿಷ್ಟರಿಗೆ ಲಸಿಕೆ ನಿರಾಕರಣೆ ಇಲ್ಲವೇ ಇಲ್ಲ. ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್‌ ಕುರಿತು ಗೌರವವಿದೆ. ಅವರು ತಮ್ಮ ಬುದ್ಧಿಯನ್ನು ಜನರ ಕಲ್ಯಾಣಕ್ಕೆ ಬಳಸಿದರೆ ಉತ್ತಮ’ ಎಂದು ತಿರುಗೇಟು ನೀಡಿದರು.

‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತರಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಮಾತು ಕೇಳಿದರೆ ಜೀವ ಹೋಗುತ್ತದೆ. ಬಿಜೆಪಿ ಮಾತು ಕೇಳಿ ಲಸಿಕೆ ಪಡೆದರೆ ಜೀವ ಉಳಿಯುತ್ತದೆ’ ಎಂದು ಹೇಳಿದರು.

ADVERTISEMENT

‘ಕಪ್ಪು ಶಿಲೀಂಧ್ರಕ್ಕೆ ರಾಜ್ಯದಾದ್ಯಂತ ಉಚಿತ ಚಿಕಿತ್ಸೆ ನೀಡಲು ತೀರ್ಮಾನಿಸಬೇಕು ಎಂದು ಮುಖ್ಯಮಂತ್ರಿಗೆ ಒತ್ತಾಯಿಸಲಾಗುವುದು. ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ನಾಯಕರು ನೀಡುವ ಸಲಹೆ ಪಡೆಯಲು ರಾಜ್ಯ ಸರ್ಕಾರ ಸಿದ್ಧವಿದೆ’ ಎಂದರು.

‘ಮುಖ್ಯಮಂತ್ರಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಯಾವ ಕಾರಣಕ್ಕೂ ಬದಲಾವಣೆ ಸಾಧ್ಯವಿಲ್ಲ. ಸಣ್ಣಪುಟ್ಟವರು ದೆಹಲಿಗೆ ಹೋಗಿ ರಾಜಕಾರಣ ಮಾಡಲು ಮುಂದಾಗುತ್ತಿರುವುದು ಶೋಭೆ ತರುವಂತದಲ್ಲ’ ಎಂದು ಸಚಿವ ಸಿ.ಪಿ. ಯೋಗೇಶ್ವರ್‌ಗೆ ಟಾಂಗ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.