ADVERTISEMENT

ಕೊಡಗು | ಲಾಕ್‌ಡೌನ್ ದಿಗ್ಭಂಧನ: ಅಕ್ಕಿಗಂಜಿಯೇ ಗಿರಿಜನರಿಗೆ ನಿತ್ಯ ಅಮೃತ!

ಆದಿವಾಸಿಗಳ ಬದುಕು ಚಿಂತಾಜನಕ

ರಘು ಹೆಬ್ಬಾಲೆ
Published 18 ಏಪ್ರಿಲ್ 2020, 2:26 IST
Last Updated 18 ಏಪ್ರಿಲ್ 2020, 2:26 IST
ಕುಶಾಲನಗರ ಸಮೀಪದ ಕಬ್ಬಿನಗದ್ದೆ ಹಾಡಿ ನಿವಾಸಿಗಳು ನೆರವಿಗಾಗಿ ಕಾದು ಕುಳಿತ ದೃಶ್ಯ
ಕುಶಾಲನಗರ ಸಮೀಪದ ಕಬ್ಬಿನಗದ್ದೆ ಹಾಡಿ ನಿವಾಸಿಗಳು ನೆರವಿಗಾಗಿ ಕಾದು ಕುಳಿತ ದೃಶ್ಯ   

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಕಟ್ಟುನಿಟ್ಟಿನ ದಿಗ್ಬಂಧನ ಜಾರಿಗೊಳಿಸಿದ್ದು, ಇದರಿಂದ ಆದಿವಾಸಿಗಳ ಬದುಕು ಚಿಂತಾಜನಕವಾಗಿದೆ. ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ 170ಕ್ಕೂ ಹೆಚ್ಚಿನ ಗಿರಿಜನ ಹಾಡಿಗಳಿವೆ. ಅಂದಾಜು 50 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ.

ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು, ಬಾಳೆಗುಂಡಿ, ಮಾವಿನಹಳ್ಳ, ರಂಗಸಮುದ್ರ, ಹೊಸಪಟ್ಟಣ, ಕಬ್ಬಿನಗದ್ದೆ, ಕಟ್ಟೆಹಾಡಿ, ಬಸವನಹಳ್ಳಿ, ಹೆಬ್ಬೆಟ್ಟಗೇರಿ, ಚಿಕ್ಕಬೆಟ್ಟಗೇರಿ, ಹೊಸಕಾಡು, ನಾಕೂರು ಶಿರಂಗಾಲ, ಕಲ್ಲೂರು, ಹೊಸಕಾಡು, ಹೇರೂರು, ಯಡವನಾಡು, ಗಂಧದಹಾಡಿ, ಸೀತಾಕಾಲೊನಿ, ಸೂಳೇಬಾವಿ, ರಂಗನಹಾಡಿ, ಸಜ್ಜಳ್ಳಿಹಾಡಿ, ಬ್ಯಾಡಗೊಟ್ಟ ಸೇರಿದಂತೆ ಬಹುತೇಕ ಹಾಡಿಗಳಲ್ಲಿ ನೂರಾರು ಗಿರಿಜನ ಕುಟುಂಬಗಳು ವಾಸಿಸುತ್ತಿದ್ದಾರೆ.

ಗಿರಿಜನರು ತಮ್ಮ ಜೀವನ ನಿರ್ವಾಹಣೆಗಾಗಿ ದಿನಗೂಲಿ ಕೆಲಸವನ್ನು ಅವಲಂಬಿಸಿದ್ದಾರೆ. ಇಲ್ಲಿನ ಜನರು ಕಾಫಿ ತೋಟ ಹಾಗೂ ಕೃಷಿ ಚಟುವಟಿಕೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಾಫಿ ತೋಟಗಳಿಗೆ ಹೋಗಿ ದುಡಿದು ತಮ್ಮ ಕುಟುಂಬ ನಿರ್ವಾಹಣೆ ಮಾಡಿಕೊಂಡು ಬರುತ್ತಿದ್ದರು.ಆದರೆ, ಕೊರೊನಾ ಭೀತಿಯಿಂದ ಯಾರೂ ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿದ್ದು, ಗಿರಿಜನರಿಗೆ ದುಡಿಯಲು ಕೆಲಸವಿಲ್ಲ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ADVERTISEMENT

ಆಹಾರ ಸಮಸ್ಯೆ: ಪ್ರತಿದಿನ ಕೂಲಿನಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈ ಕುಟುಂಬಗಳಿಗೆ ಆಹಾರ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಗೆಡ್ಡೆ ಗೆಣಸು ತರಲು ಅರಣ್ಯಕ್ಕೂ ಹೋಗಲಾಗದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗಿರಿಜನ ಸಮಗ್ರ ಅಭಿವೃದ್ಧಿ ಇಲಾಖೆ ವತಿಯಿಂದ ಆದಿವಾಸಿ ಕುಟುಂಬಗಳಿಗೆ ನೀಡುತ್ತಿದ್ದ ಪೌಷ್ಟಿಕಾಂಶ ಆಹಾರ ಕೂಡ ಸರಿಯಾಗಿ ವಿತರಣೆಯಾಗುತ್ತಿಲ್ಲ.

ಲಾಕ್ ಡೌನ್ ಘೋಷಣೆ ಬಳಿಕ ಮೂರು ತಿಂಗಳಿಗೆ ಸಾಕಾಗುವಷ್ಟು ಆಹಾರವನ್ನು ಪ್ರತಿ ಕುಟುಂಬಕ್ಕೆ ನೀಡಬೇಕು ಎಂದು ಸರ್ಕಾರ ಸೂಚನೆ ನೀಡಿದ್ದರೂ ಐಟಿಡಿಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಆರ್.ಕೆ.ಚಂದ್ರು ದೂರಿದ್ದಾರೆ. ಅರಣ್ಯ ಪ್ರದೇಶ ಅಂಚಿನಲ್ಲಿ ಹೆಚ್ಚಿನ ಗಿರಿಜನ ಹಾಡಿಗಳಿದ್ದು, ಇದುವರೆಗೆ ಯಾವುದೇ ಅಧಿಕಾರಿಗಳಾಲಿ ಅಥವಾ ಸಂಘಸಂಸ್ಥೆಗಳಾಲಿ ಇತ್ತಕಡೆ ಮುಖಮಾಡಿಲ್ಲ.

ರೋಗ ಹರಡುವ ಭೀತಿ: ಯಾವುದೇ ಮಾಸ್ಕ್, ಸ್ಯಾನಿಟೈಸರ್ ಹಾಗೂ ಹಾಗೂ ಸೋಪು, ಆಹಾರ ಪದಾರ್ಥಗಳನ್ನು ವಿತರಣೆ ಮಾಡಿಲ್ಲ. ಬೇರೆ ಬೇರೆ ಕಡೆಗಳಲ್ಲಿ ಕಾರ್ಮಿಕ ಇಲಾಖೆಯವರು ಅಗತ್ಯ ವಸ್ತುಗಳೊಂದಿಗೆ ಮಾಸ್ಕ್, ಸ್ಯಾನಿಟೈಸರ್ ಗಳನ್ನು ವಿತರಣೆ ಮಾಡುತ್ತಿದ್ದಾರೆ. ಆದರೆ ಗಿರಿಜನ ಸಮಸ್ಯೆಗಳ ಬಗ್ಗೆ ಯಾರು ಚಿಂತನೆ ಮಾಡುತ್ತಿಲ್ಲ ಎಂದು ಸಮುದಾಯದ ಮುಖಂಡ ಬೋಜಪ್ಪ ಬೇಸರ ವ್ಯಕ್ತಪಡಿಸಿದರು.

ವಾರಕ್ಕೆ ಮೂರು ದಿನ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಿಗ್ಗೆ 6 ರಿಂದ 12 ಗಂಟೆ ವರೆಗೆ ಅಗತ್ಯ ವಸ್ತುಗಳು,ತರಕಾರಿಗಳನ್ನು ಖರೀದಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಆದರೆ ಇದು ಪಟ್ಟಣ ವ್ಯಾಪ್ತಿಗೆ ಸೀಮಿತವಾಗಿದೆ. ಕುಶಾಲನಗರ ಪಟ್ಟಣದಲ್ಲಿ ಮಾತ್ರ ಸಂತೆ ನಡೆಯುತ್ತಿದೆ. ದೂರದ ಹಾಡಿ ಗಿರಿಜನರಿಗೆ ತರಕಾರಿಕೊಳ್ಳಲು ಸಾಧ್ಯವಾಗದ ಸ್ಥಿತಿ ಇದೆ. ತರಕಾರಿ ಹಾಗೂ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ಪಟ್ಟಣಕ್ಕೆ ಬರಬೇಕಾಗಿದೆ. ಆದರೆ ಹಾಡಿಗಳ ಗಿರಿಜನರಿಗೆ ಯಾವುದೇ ವಾಹನ ವ್ಯವಸ್ಥೆ ಇಲ್ಲ. ಇದರಿಂದ ಸಂತೆಗೆ ಬರಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.

ನ್ಯಾಯಬೆಲೆ ಅಂಗಡಿಗಳಿಂದ ನೀಡಿದ ಅಕ್ಕಿಯಿಂದ ನಿತ್ಯ ಗಂಜಿ ಮಾಡಿಕೊಂಡು ಕುಡಿಯುತ್ತ ಮನೆಮಂದಿಯಲ್ಲ ಜೀವನ ಸಾಗಿಸಬೇಕಾದ ದುಸ್ಥಿತಿ ಉಂಟಾಗಿದೆ. ಆದ್ದರಿಂದ ಗಿರಿಜನ ಹಾಡಿಯ ಜನರಿಗೆ ವಾಹನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಅವರನ್ನು ಸಂತೆ ಕರೆದುಕೊಂಡು ಬಂದು ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಬೇಕು ಎಂದು ಚಂದ್ರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.