ADVERTISEMENT

ಕೊರೊನಾ ಭೀತಿ: ಸುಂಟಿಕೊಪ್ಪದಲ್ಲಿ ವಾರದ ಸಂತೆ ರದ್ದು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 13:29 IST
Last Updated 14 ಮಾರ್ಚ್ 2020, 13:29 IST

ಸುಂಟಿಕೊಪ್ಪ: ರಾಜ್ಯದಲ್ಲಿ ಕೊರೊನಾ ಭೀತಿ ಎದುರಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಮುಂಜಾಗ್ರತಾ ಕ್ರಮವಾಗಿ ಭಾನುವಾರ ನಡೆಯಬೇಕಾಗಿದ್ದ ಸುಂಟಿಕೊಪ್ಪ ವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಒ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.

ದಿನದಿಂದ ದಿನಕ್ಕೆ ಕೊರೊನಾ ಭೀತಿ ಹೆಚ್ಚಾದ ಕಾರಣ ಯಾವುದೇ ಸಭೆ, ಸಮಾರಂಭ ನಡೆಸದಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಕಾರಣದಿಂದ, ಮಾ.17ರಂದು ಸೆಸ್ಕ್ ಇಲಾಖೆಯ ಹಿಂಭಾಗದಲ್ಲಿರುವ ಗ್ರಾಮ ದೇವತೆಯ ಮೊದಲನೇ ವಾರ್ಷಿಕೋತ್ಸವವನ್ನು ಸಹ ಮುನ್ನೆಚ್ಚರಿಕಾ ಕ್ರಮವಾಗಿ ಮುಂದೂಡಲಾಗಿದೆ.

ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ದುಬೈ ಇನ್ನಿತರ ವಿದೇಶಗಳಿಂದ ಆಗಮಿಸಿರುವ ಸ್ಥಳೀಯರು ಮತ್ತು ಸಂಬಂಧಿಗಳು ತಮ್ಮ ಮಾಹಿತಿಗಳನ್ನು ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಮೂದಿಸಿ ತಪಾಸಣೆ ನಡೆಸಲು ಸಹಕರಿಸುವಂತೆ ಡಿಹೆಚ್‌ಒ ಡಾ.ಮೋಹನ್ ಕುಮಾರ್ ಮನವಿ ಮಾಡಿದ್ದಾರೆ.

ADVERTISEMENT

ಆತಂಕ ಬೇಡ: ಕೊರೊನಾ ವಿಚಾರದಲ್ಲಿ ಯಾರೂ ಕೂಡ ಆತಂಕ ಪಡುವುದು ಬೇಡ. ವಿದೇಶದಿಂದ ಬಂದವರನ್ನು ಅನಿವಾರ್ಯವಾಗಿ ಅವರನ್ನು ತಪಾಸಣೆಗೆ ಒಳಪಡಿಸುವುದು ಅನಿವಾರ್ಯ. ಅವರನ್ನು ತಪಾಸಣೆಗೆ ಒಳಪಡಿಸಿದ ಕೂಡಲೇ ಅವರು ಕೊರೊನಾ ಸೋಂಕು ಹರಡಿದವರು ಎಂದು ಯಾರೂ ಭಾವಿಸಬಾರದು. ಈಗಾಗಲೇ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಸ್ಥಳೀಯ ಜನರು ಹೊರಗಿನಿಂದ ಬಂದವರ ಬಗ್ಗೆ ಮಾಹಿತಿ ನೀಡಿ ನಮ್ಮೊಂದಿಗೆ ಕೈ ಜೋಡಿಸಿ ಎಂದು ಟಿಹೆಚ್‌ಒ ಡಾ.ಶ್ರೀನಿವಾಸ್ ’ಪ್ರಜಾವಾಣಿ’ಗೆ ಮನವಿ ಮಾಡಿದ್ದಾರೆ.

ಈ ವಾರದಲ್ಲಿ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸುಂಟಿಕೊಪ್ಪದ 2ನೇ ವಿಭಾಗ, ಗದ್ದೆಹಳ್ಳ, ಏಳನೇ ಹೊಸಕೋಟೆ, ಕಲ್ಲೂರು, ಕಾನ್‌ಬೈಲ್ ನಲ್ಲಿ ಅಂದಾಜು 10ಮಂದಿ ದುಬೈನಿಂದ ಆಗಮಿಸಿದ್ದು, ಅವರ ಸಂಪೂರ್ಣ ಮಾಹಿತಿ ಮತ್ತು ಅವರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.