ADVERTISEMENT

ಪಟಾಕಿ ನಿಷೇಧ ಆದೇಶ; ಹೈಕೋರ್ಟ್‌ ಅತೃಪ್ತಿ

ಇಂದು ಬೆಳಿಗ್ಗೆಯೇ ಪ್ರತಿಕ್ರಿಯೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 19:36 IST
Last Updated 12 ನವೆಂಬರ್ 2020, 19:36 IST
ಪಟಾಕಿ ಮಾರಾಟ– ಸಾಂದರ್ಭಿಕ ಚಿತ್ರ
ಪಟಾಕಿ ಮಾರಾಟ– ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಟಾಕಿ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪರಿಣಾಮಕಾರಿಯಾಗಿಲ್ಲ ಎಂದು ಗುರುವಾರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಶುಕ್ರವಾರ ಬೆಳಿಗ್ಗೆ 10.30ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸಂಪೂರ್ಣವಾಗಿ ಪಟಾಕಿ ನಿಷೇಧಿಸುವಂತೆ ಕೋರಿ ವಿಷ್ಣು ಭರತ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ, ‘ಹಸಿರು ಪಟಾಕಿಗಳನ್ನು ಮಾತ್ರ ಬಳಸಬಹುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ‘ಹಸಿರು ಪಟಾಕಿ’ಯ ಅರ್ಥವನ್ನೇ ಸರಿಯಾಗಿ ವಿವರಿಸಿಲ್ಲ. ಪರಿಷ್ಕೃತ ಆದೇಶ ಹೊರಡಿಸಲು ಇನ್ನೂ ಕಾಲ ಮಿಂಚಿಲ್ಲ’ ಎಂದು ಹೇಳಿತು.

ಪಟಾಕಿ ನಿಷೇಧ ಕುರಿತು ಕೋಲ್ಕತ್ತಾ ಹೈಕೋರ್ಟ್‌ ಹೊರಡಿಸಿರುವ ಆದೇಶವನ್ನು ಅರ್ಜಿದಾರರು ನ್ಯಾಯಪೀಠದ ಗಮನಕ್ಕೆ ತಂದರು. ರಾಜ್ಯ ಸರ್ಕಾರದ ಎರಡು ಆದೇಶಗಳ ಪ್ರತಿ ಸಲ್ಲಿಸಿದ ಹೆಚ್ಚುವರಿ ಸರ್ಕಾರಿ ವಕೀಲರು, ‘ಎರಡೂ ಆದೇಶಗಳನ್ನು ಪರಸ್ಪರ ಪೂರಕವಾಗಿ ಪರಿಗಣಿಸಬೇಕು. ಹಸಿರು ಪಟಾಕಿಗಳ ಹೊರತಾಗಿ ಬೇರೆ ಎಲ್ಲ ರೀತಿಯ ಪಟಾಕಿಗಳ ಬಳಕೆ ನಿಷೇಧಿಸಲಾಗಿದೆ’ ಎಂದರು.

ADVERTISEMENT

‘ಹಸಿರು ಪಟಾಕಿ ಬಗ್ಗೆ ವ್ಯಾಖ್ಯಾನಿಸಲು ರಾಜ್ಯ ಸರ್ಕಾರ ಆಸಕ್ತಿ ತೋರಿಲ್ಲ. ಆದೇಶವನ್ನು ಅನುಷ್ಠಾನಕ್ಕೆ ತರಬೇಕಾದ ಅಧಿಕಾರಿಗಳಿಗೂ ಹಸಿರು ಪಟಾಕಿ ಎಂದರೆ ಯಾವುದು ಎಂಬುದು ಗೊತ್ತಿಲ್ಲ’ ಎಂದು ವಿಭಾಗೀಯ ಪೀಠ ಪ್ರತಿಕ್ರಿಯಿಸಿತು.

ಪಟಾಕಿ ಸುಡುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಪ್ರಸ್ತಾಪಿಸಿದ ನ್ಯಾಯಾಲಯ, ‘ಮುಂಜಾಗ್ರತೆ ಮತ್ತು ಸಾರ್ವಜನಿಕ ನಂಬಿಕೆಯ ದೃಷ್ಟಿಯಿಂದ ಪೀಠವು ಬಿಗಿಯಾದ ಆದೇಶ ಹೊರಡಿಸಬಹುದು. ಪಟಾಕಿ ಬಳಕೆಯಿಂದ ಕೊರೊನಾ ಹರಡುವ ಅಪಾಯವಿದೆ. ಹೀಗಾಗಿ, ರಾಜ್ಯ ಸರ್ಕಾರ ಬಿಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದಿತು.

ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದ ಪೀಠ, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಶಬ್ದ ಮಾಲಿನ್ಯದ ಪ್ರಮಾಣ ಮಾಪನ ಮಾಡಲು ಸಾಧ್ಯವೇ ಎಂಬುದರ ಕುರಿತು ವಿವರಣೆ ಸಲ್ಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.