ADVERTISEMENT

ಕುಮಾರಸ್ವಾಮಿ–ಜಮೀರ್ ಬೆಂಬಲಿಗರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 18:40 IST
Last Updated 9 ಜೂನ್ 2021, 18:40 IST
   

ಬೆಂಗಳೂರು: ಸದಾಶಿವ ನಗರದಲ್ಲಿರುವ ಅತಿಥಿಗೃಹದ ವಿಚಾರವಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಶಾಸಕ ಬಿ.ಜಡ್‌.ಜಮೀರ್ ಅಹಮದ್ ಖಾನ್‌ ಬೆಂಬಲಿಗರ ಮಧ್ಯೆ ಬುಧವಾರ ಗಲಾಟೆ ನಡೆದಿದೆ.

ಜಮೀರ್‌ ಅವರಿಗೆ ಸೇರಿದ್ದ ಅತಿಥಿಗೃಹವನ್ನುಹಲವು ವರ್ಷಗಳ ಹಿಂದೆ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಡಲಾಗಿತ್ತು. ಅತಿಥಿಗೃಹದ ಮಾಲೀಕತ್ವದ ವಿಚಾರವಾಗಿ ಇಬ್ಬರು ನಾಯಕರ ಬೆಂಬಲಿಗರು ಗಲಾಟೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಲಾಟೆ ಸಂಬಂಧ ದೂರು‌ ನೀಡಲು‌ಜಮೀರ್ ಅವರ ಆಪ್ತ ಸಹಾಯಕ‌ ಫಾರೂಕ್, ಸದಾಶಿವನಗರ ಠಾಣೆಗೆ ಹೋಗಿದ್ದರು. ಆದರೆ, ವಿಚಾರವನ್ನು ಇತ್ಯರ್ಥಪಡಿಸಿಕೊಳ್ಳುವ ಸಲುವಾಗಿ ಜಮೀರ್‌, ಅವರನ್ನು ವಾಪಸ್ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.

ADVERTISEMENT

ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ,‘ನಾಲ್ಕೈದು ವರ್ಷದಿಂದ ಅತಿಥಿಗೃಹಕ್ಕೆ ಹೋಗಿಲ್ಲ. ಸಿನಿಮಾ ಕ್ಷೇತ್ರದ ಕೆಲವರು ಅಲ್ಲಿದ್ದರು. ಅವರ ಸಾಮಗ್ರಿಗಳು ಅಲ್ಲಿದ್ದು, ಅವರು ಊರಿಗೆ ಹೋಗಿದ್ದಾಗ ಆರೋಪ ಮಾಡುತ್ತಿರುವ ಕಡೆಯವರು ಬೀಗ ಹಾಕಿದ್ದಾರೆ. ಸಾಮಗ್ರಿ ತೆರವು ಮಾಡಲು ಭೋಜೇಗೌಡರಿಗೆ ಹೇಳಿದ್ದೆ. ಸಾಮಗ್ರಿ ತರಲು ಸಿನಿಮಾದವರು ಹೋಗಿರಬೇಕು. ಗಲಾಟೆ ಮಾಡುವ ಉದ್ದೇಶ ನನಗಿಲ್ಲ. ಅವರ ಮಟ್ಟಕ್ಕೆ ನಾನು ಇಳಿಯುವುದಿಲ್ಲ’ ಎಂದರು.

‘ಬುಧವಾರದ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ವಿರುದ್ಧ ಮಾತನಾಡಿದಕ್ಕಾಗಿ ಅವರ ಕಡೆಯವರು ಗೆಸ್ಟ್‌ಹೌಸ್‌ಗೆ ಹಾಕಿದ್ದ ಬೀಗ ಒಡೆದಿದ್ದಾರೆ. ಭೋಜೇಗೌಡರು ಘಟನೆ ಸಂಬಂಧ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ. ಅಲ್ಲಿರುವ ಸಾಮಗ್ರಿ ತೆರವು ಮಾಡಿ, ನನ್ನ ಜಾಗ ನನಗೆ ನೀಡಬೇಕು’ ಎಂದುಶಾಸಕ ಜಮೀರ್ ಅಹಮದ್ ಖಾನ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.