ADVERTISEMENT

‘ಐಆರ್‌ಸಿಟಿಸಿ ಏಜೆಂಟ್‌ಗೆ ಪಾಕಿಸ್ತಾನದೊಂದಿಗೆ ನಂಟು’

ಇ–ಟಿಕೆಟ್‌ ಅಕ್ರಮ; ರಾಜಗೋಪಾಲನಗರ ಪೊಲೀಸರ ವಶದಲ್ಲಿ ಮುಸ್ತಫಾ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 22:37 IST
Last Updated 24 ಜನವರಿ 2020, 22:37 IST
ಗುಲಾಂ ಮುಸ್ತಫಾ
ಗುಲಾಂ ಮುಸ್ತಫಾ   

ಬೆಂಗಳೂರು: ರೈಲ್ವೆ ಇ–ಟಿಕೆಟ್‌ ಅಕ್ರಮ ಸಂಬಂಧ ಬಂಧಿಸಲಾಗಿರುವ ಭುವನೇಶ್ವರದ ಗುಲಾಂ ಮುಸ್ತಫಾ, ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್‌ನ (ಐಆರ್‌ಸಿಟಿಸಿ) ಏಜೆಂಟ್ ಆಗಿದ್ದುಕೊಂಡೇ ‘ಡಾರ್ಕ್‌ನೆಟ್’ ಮೂಲಕ ಪಾಕಿಸ್ತಾನದ ಶಂಕಿತ ಉಗ್ರರ ಜೊತೆ ನಂಟು ಇಟ್ಟುಕೊಂಡಿರುವ ಸಂಗತಿ ತನಿಖೆಯಿಂದ ಹೊರಬಿದ್ದಿದೆ.

ಭುವನೇಶ್ವರದ ಗುಲಾಂ ಮುಸ್ತಫಾನನ್ನು ಇತ್ತೀಚೆಗಷ್ಟೇರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್‌) ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ 2019ರಲ್ಲೇ ಬೆಂಗಳೂರಿನ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ಪ್ರಕರಣ ಸಂಬಂಧ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ.

‘ರೈಲ್ವೆ ಇ–ಟಿಕೆಟ್ ಅಕ್ರಮವಾಗಿ ಮಾರುತ್ತಿದ್ದಹನುಮಂತರಾಜು ಎಂಬಾತ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆತನೇಗುಲಾಂ ಮುಸ್ತಫಾನ ಹೆಸರು ಬಾಯ್ಬಿಟ್ಟಿದ್ದ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವಲ್ಲಿ ಪರಿಣಿತನಾಗಿರುವ ಮುಸ್ತಫಾ, 2017ರ ಅಕ್ಟೋಬರ್‌ನಲ್ಲಿ ಐಆರ್‌ಸಿಟಿಸಿ ಏಜೆಂಟ್‌ ಆಗಿ ನೋಂದಣಿ ಮಾಡಿಕೊಂಡಿದ್ದ. ಆನ್‌ಲೈನ್ ಮೂಲಕ ರೈಲ್ವೆ ಇ–ಟಿಕೆಟ್‌ಗಳನ್ನು ಬುಕ್ಕಿಂಗ್ ಮಾಡಿಕೊಡುವ ಐ.ಡಿ ಸಹ ಪಡೆದುಕೊಂಡಿದ್ದ’ ಎಂದು ಅಧಿಕಾರಿ ಹೇಳಿದರು.

‘ಯಾರದ್ದೋ ಹೆಸರಿನಲ್ಲಿ ರೈಲ್ವೆ ಇ–ಟಿಕೆಟ್‌ ಬುಕ್ಕಿಂಗ್ ಮಾಡಿಟ್ಟುಕೊಳ್ಳುತ್ತಿದ್ದ ಆರೋಪಿ, ಅದನ್ನೇ ಬೇರೆಯವರಿಗೆ ಮಾರಾಟ ಮಾಡಲಾರಂಭಿಸಿದ್ದ. ಅದರಿಂದ ಹೆಚ್ಚು ಹಣ ಬರುತ್ತಿದ್ದಂತೆ, ರೈಲ್ವೆ ಇಲಾಖೆಯ ‘ಎಎನ್‌ಎಂಎಸ್’ ಸಾಫ್ಟ್‌ವೇರ್‌ ಅನ್ನೇ ಹ್ಯಾಕ್ ಮಾಡಿದ್ದ. ಯಾರದ್ದೋ ಹೆಸರು ಮತ್ತು ವಿಳಾಸಗಳನ್ನು ಬಳಸಿಕೊಂಡು 563ಕ್ಕೂ ಹೆಚ್ಚು ಪರ್ಸನಲ್ ಐ.ಡಿ.ಗಳನ್ನು ಸೃಷ್ಟಿಸಿದ್ದ. ಅದರ ಮೂಲಕವೇ ಇ–ಟಿಕೆಟ್ ಕಾಯ್ದಿರಿಸಲಾರಂಭಿಸಿದ್ದ’ ಎಂದರು.

‘ಮೇಲಿಂದ ಮೇಲೆ ಅಕ್ರಮ ಎಸಗಲು ಸಂಚು ರೂಪಿಸಲಾರಂಭಿಸಿದ್ದ ಆರೋಪಿ ‘ಡಾರ್ಕ್‌ನೆಟ್’ ಬಗ್ಗೆ ತಿಳಿದುಕೊಳ್ಳಲಾರಂಭಿಸಿದ್ದ. ಆ ಮೂಲಕವೇ ಆತನಿಗೆ ಪಾಕಿಸ್ತಾನದ ಕೆಲವರ ಪರಿಚಯವಾಗಿತ್ತು. ಅವರ ಜೊತೆ ಸೇರಿಕೊಂಡು ಹಲವು ಜಾಲತಾಣಗಳನ್ನು ಹ್ಯಾಕ್‌ ಮಾಡಿದ್ದಾನೆ. ಅವರೆಲ್ಲ ಶಂಕಿತ ಉಗ್ರರೆಂಬ ಅನುಮಾನವಿದೆ. ಆರೋಪಿಯಿಂದ ಪಡೆದಿರುವ ಮಾಹಿತಿಯಿಂದ ದುಷ್ಕೃತ್ಯ ಎಸಗಲು ಅವರೆಲ್ಲ ಸಂಚು ರೂಪಿಸುತ್ತಿರುವ ಶಂಕೆ ಇದೆ’ ಎಂದು ಅಧಿಕಾರಿ ಹೇಳಿದರು.

‘ಕೇಂದ್ರ ಸರ್ಕಾರದ ಜಾಲತಾಣಗಳು ಹಾಗೂ ನಿಷೇಧಿತ ಜಾಲತಾಣಗಳನ್ನು ಹ್ಯಾಕ್ ಮಾಡಿರುವುದಾಗಿ ಆರೋಪಿ ಹೇಳುತ್ತಿದ್ದಾನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸೈಬರ್ ತಜ್ಞರ ಸಹಾಯ ಪಡೆಯಬೇಕಿದೆ’ ಎಂದು ಅವರು ಮಾಹಿತಿ ನೀಡಿದರು.

ಸಿಸಿಬಿಗೆ ತನಿಖೆ ಜವಾಬ್ದಾರಿ? ‘ಆರೋಪಿ ಹಲವು ಮಹತ್ವದ ಮಾಹಿತಿ ನೀಡುತ್ತಿದ್ದಾನೆ. ಅದನ್ನು ಆಧರಿಸಿ ತನಿಖೆ ನಡೆಸಬೇಕಾಗಿದೆ. ಹೀಗಾಗಿ, ಈ ಪ್ರಕರಣದ ತನಿಖೆಯನ್ನು ಸಿಸಿಬಿ ಅಥವಾ ಸಿಐಡಿಗೆ ವಹಿಸುವಂತೆ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ತನಿಖಾಧಿಕಾರಿ ಈಗಾಗಲೇ ಮನವಿ ಸಲ್ಲಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

₹15 ಕೋಟಿಗೂ ಹೆಚ್ಚು ವಹಿವಾಟು?‘ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ದುಬೈನ ಕೆಲವರ ಜೊತೆ ಮುಸ್ತಫಾ ಡನಾಟವಿಟ್ಟುಕೊಂಡಿದ್ದ. ಇವರ ತಂಡವೇ ಡಾರ್ಕ್‌ನೆಟ್ ಮೂಲಕ ಹಲವು ಅಕ್ರಮ ವ್ಯವಹಾರ ನಡೆಸುತ್ತಿದ್ದ. ಮಾಸಿಕ ₹15 ಕೋಟಿಗೂ ಹೆಚ್ಚು ವಹಿವಾಟು ಇವರದ್ದಾಗಿದೆ’ ಎಂದು ಹಿರಿಯ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.