ADVERTISEMENT

ಸ್ಯಾಂಟ್ರೊ ರವಿ ಪ್ರಕರಣ: ಸುಳ್ಳು ಪಾತ್ರ, ಸಾಕ್ಷ್ಯ ಸೃಷ್ಟಿಸಿದ್ದ ಇನ್‌ಸ್ಪೆಕ್ಟರ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 19:46 IST
Last Updated 9 ಜನವರಿ 2023, 19:46 IST
ಸ್ಯಾಂಟ್ರೊ ರವಿ ಮತ್ತು ಇನ್‌ಸ್ಪೆಕ್ಟರ್ ಪ್ರವೀಣ್
ಸ್ಯಾಂಟ್ರೊ ರವಿ ಮತ್ತು ಇನ್‌ಸ್ಪೆಕ್ಟರ್ ಪ್ರವೀಣ್   

ಬೆಂಗಳೂರು: ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದ ಆರೋಪಿ ಕೆ.ಎಸ್‌. ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೊ ರವಿ ಸಂಚಿನಲ್ಲಿ ಭಾಗಿಯಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಪ್ರವೀಣ್, ಸುಳ್ಳು ಪಾತ್ರ ಹಾಗೂ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ಅಮಾಯಕ ಸಹೋದರಿಯರನ್ನು ಬಂಧಿಸಿದ್ದ ಸಂಗತಿ ತನಿಖೆಯಿಂದ ಬಯಲಾಗಿದೆ.

ಮೈಸೂರು ವಿಜಯನಗರ ಠಾಣೆಗೆ ಜ. 2ರಂದು ದೂರು ನೀಡಿದ್ದ ಸಂತ್ರಸ್ತೆ, ‘ನನ್ನ ಹಾಗೂ ನನ್ನ ಸಹೋದರಿ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದ ಕಾಟನ್‌ಪೇಟೆ ಠಾಣೆ ಇನ್‌ಸ್ಪೆಕ್ಟರ್ ಪ್ರವೀಣ್, ನಮ್ಮಿಬ್ಬರನ್ನು ಬಂಧಿಸಿದ್ದರು. ಕೆ.ಎಸ್. ಮಂಜುನಾಥ್ ಅಣತಿಯಂತೆ ಕೆಲಸ ಮಾಡಿದ್ದ ಪ್ರವೀಣ್, ನಾವಿಬ್ಬರೂ ಘಟನಾ ಸ್ಥಳದಲ್ಲಿ ಇಲ್ಲದಿದ್ದರೂ ಸುಳ್ಳು ಪಾತ್ರ ಹಾಗೂ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದರು’ ಎಂದು ಪೊಲೀಸರ ಎದುರು ಆರೋಪಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ತನಿಖೆ ನಡೆಸಿ ವರದಿ ನೀಡುವಂತೆ ಕಮಿಷನರ್ ಪ್ರತಾಪ್ ರೆಡ್ಡಿ ಮೂಲಕ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಅವರಿಗೆ ಸೂಚಿಸಿದ್ದರು. ಅದರಂತೆ ತನಿಖೆ ಪೂರ್ಣಗೊಳಿಸಿ, ವರದಿಯನ್ನು ಪ್ರವೀಣ್ ಸೂದ್‌ ಅವರಿಗೆ ಸಲ್ಲಿಸಲಾಗಿದೆ.

ADVERTISEMENT

ಸಹೋದರಿಯರನ್ನು ಜೈಲಿಗಟ್ಟಲು ಸಂಚು: ‘ಸದ್ಯ ಮೈಸೂರಿನಲ್ಲಿ ದೂರು ಸಲ್ಲಿಸಿರುವ ಸಂತ್ರಸ್ತೆ, ಸಹೋದರಿ ಹಾಗೂ ಪೋಷಕರ ಜೊತೆ ವಾಸವಿದ್ದರು. ತನ್ನ ವಿರುದ್ಧ ತಿರುಗಿಬಿದ್ದರೆಂಬ ಕಾರಣಕ್ಕೆ ಸಂತ್ರಸ್ತೆ ಹಾಗೂ ಸಹೋದರಿಯನ್ನು ಜೈಲಿಗಟ್ಟಲು ಆರೋಪಿ ಸ್ಯಾಂಟ್ರೊ ರವಿ ಸಂಚು ರೂಪಿಸಿದ್ದ. ಇದಕ್ಕಾಗಿ ಇನ್‌ಸ್ಪೆಕ್ಟರ್‌ ಪ್ರವೀಣ್ ಸಹಾಯ ಪಡೆದಿದ್ದ’.

‘ಸದ್ಯ ಗುಪ್ತದಳದ ಕೆಲಸ ಮಾಡುತ್ತಿರುವ ಪ್ರವೀಣ್, 2022ರ ಡಿಸೆಂಬರ್‌ನಲ್ಲಿ ಕಾಟನ್‌ಪೇಟೆ ಇನ್‌ಸ್ಪೆಕ್ಟರ್ ಆಗಿ
ದ್ದರು. ವರ್ಗಾವಣೆ ವಿಚಾರಕ್ಕಾಗಿ ರವಿಯನ್ನು ಸಂಪರ್ಕಿಸಿದ್ದರೆಂದು ಹೇಳಲಾಗಿದೆ. ವರ್ಗಾವಣೆ ಆಮಿಷವೊಡ್ಡಿದ್ದ ರವಿ, ತನ್ನ ಕೆಲಸ ಮಾಡಿಸಿಕೊಂಡಿದ್ದ’ ಎಂದು ಮೂಲಗಳು ತಿಳಿಸಿವೆ.

‘ದೃಶ್ಯ’ ಸಿನಿಮಾ ಮೀರಿಸಿದ ಕಥೆ: ‘2022ರ ನವೆಂಬರ್ 23ರಂದು ಮೆಜೆಸ್ಟಿಕ್ ಖೋಡೆ ವೃತ್ತ ಸಮೀಪದ ರೈಲ್ವೆ ಕೆಳಸೇತುವೆ ಬಳಿ ಪ್ರಕಾಶ್ ಎಂಬುವವರ ಮೇಲೆ ಸ್ಯಾಂಟ್ರೊ ರವಿ ಸಹಚರ ಶೇಖ್ ಎಂಬಾತ ಹಲ್ಲೆ ಮಾಡಿದ್ದ. ಪ್ರಕಾಶ್ ಹಾಗೂ ಶೇಖ್‌, ರವಿ ಸಂಚಿನಂತೆ ಪರಸ್ಪರ ಒಪ್ಪಿ ಸೃಷ್ಟಿಸಿದ್ದ ದೃಶ್ಯ ಇದಾಗಿತ್ತು. ಹಲ್ಲೆ ಸಂಬಂಧ ಪ್ರಕಾಶ್ ದೂರು ನೀಡಿದ್ದರು. ಇದೇ ಪ್ರಕರಣದಲ್ಲಿ ಸಹೋದರಿಯರನ್ನೂ ಆರೋಪಿಯನ್ನಾಗಿ ಮಾಡುವಂತೆ ಇನ್‌ಸ್ಪೆಕ್ಟರ್‌ಗೆ ಸ್ಯಾಂಟ್ರೊ ರವಿ ಸೂಚಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಘಟನಾ ಸ್ಥಳದಲ್ಲಿ ಸಹೋದರಿಯರೂ ಇದ್ದರೆಂದು ಸುಳ್ಳು ಪಾತ್ರ ಸೃಷ್ಟಿಸಿ ಎಫ್‌ಐಆರ್ ದಾಖಲಿಸಿದ್ದ ಇನ್‌ಸ್ಪೆಕ್ಟರ್ ಪ್ರವೀಣ್, ದೃಶ್ಯ ಸಿನಿಮಾ ರೀತಿಯಲ್ಲೇ ನಕಲಿ ಸಾಕ್ಷ್ಯಗಳನ್ನು ಹುಟ್ಟುಹಾಕಿದ್ದರು.’

‘ಸಹೋದರಿಯರು, ದೂರುದಾರ ಪ್ರಕಾಶ್ ಬಳಿ ₹ 5 ಲಕ್ಷ ಸಾಲ ಕೇಳಿದ್ದರು. ಅದಕ್ಕೆ ಭದ್ರತೆಯಾಗಿ ಕೆನರಾ ಬ್ಯಾಂಕ್‌ನ ಚೆಕ್‌ ನೀಡಿದ್ದರು. ಹಣ ಕೊಡುವುದಕ್ಕಾಗಿ ಪ್ರಕಾಶ್, ಖೋಡೆ ವೃತ್ತ ಸಮೀಪದ ರೈಲ್ವೆ ಕೆಳಸೇತುವೆ ಬಳಿ ಹೋಗಿದ್ದರು. ಅವರ ಕೈಗಳನ್ನು ಆರೋಪಿ ಶೇಖ್ ಹಿಂದಿನಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದ. ಸಂತ್ರಸ್ತೆ ಮಹಿಳೆ, ಪ್ರಕಾಶ್ ಹಣೆಗೆ ಚಾಕು ಹಿಡಿದಿದ್ದರು. ಅವರ ಸಹೋದರಿ, ಕತ್ತಿನಲ್ಲಿದ್ದ ಚಿನ್ನಾಭರಣ ಹಾಗೂ ₹ 9 ಸಾವಿರ ಹಣ ಕಿತ್ತುಕೊಂಡಿದ್ದರು. ಇದೇ ವೇಳೆ ಮೂವರು, ಪ್ರಕಾಶ್ ಮೇಲೆ ಹಲ್ಲೆ ಮಾಡಿದ್ದರು’ ಎಂಬುದಾಗಿ ಇನ್‌ಸ್ಪೆಕ್ಟರ್‌ ಸುಳ್ಳು ಕಥೆ ಕಟ್ಟಿದ್ದ.’

‘ಪುರಾವೆಯಾಗಿ ಕೆನರಾ ಬ್ಯಾಂಕ್ ಚೆಕ್, ಚಾಕು, ಬಸ್‌ ಪ್ರಯಾಣದ ಟಿಕೆಟ್, ಕೆಲ ಸುಳ್ಳು ಸಾಕ್ಷಿಗಳನ್ನು ತಾನೇ ಸೃಷ್ಟಿಸಿದ್ದ. ಸ್ಯಾಂಟ್ರೊ ರವಿ ಸಹ ಸಹೋದರಿಯರ ಮೊಬೈಲ್‌ಗಳನ್ನು ಕದ್ದು ಶೇಖ್‌ ಬಳಿ ಕೊಟ್ಟು ಕಳುಹಿಸಿದ್ದ. ಹೀಗಾಗಿ, ಸ್ಥಳದಲ್ಲಿ ಮೊಬೈಲ್ ನೆಟ್‌ವರ್ಕ್‌ ಇರುವಂತೆ ಬಿಂಬಿಸಲಾಗಿತ್ತು. ಎಲ್ಲ ಪುರಾವೆಗಳನ್ನು ನಿಜವೆಂದು ಸಹೋದ್ಯೋಗಿಗಳನ್ನು ನಂಬಿಸಿದ್ದ ಇನ್‌ಸ್ಪೆಕ್ಟರ್‌, ಸಹೋದರಿಯರನ್ನಷ್ಟೇ ಬಂಧಿಸಿದ್ದರು. ಇವೆಲ್ಲ ಸಂಗತಿ ಡಿಸಿಪಿ ಅವರ ತನಿಖಾ ವರದಿಯಲ್ಲಿದೆ’ ಎಂದು ಮೂಲಗಳು ವಿವರಿಸಿವೆ.

‘ಹತಾಶೆಯಿಂದ ತೇಜೋವಧೆಗೆ ಇಳಿದ ಕುಮಾರಸ್ವಾಮಿ’
ಬೆಂಗಳೂರು:
‘ನನ್ನ ಮನೆಗೆ ಬಂದು ಹಣದ ಗಂಟು ಬಿಚ್ವುವ ಧೈರ್ಯ ತೋರಲು ಯಾರಿಗೂ ಈವರೆಗೆ ಅವಕಾಶ ನೀಡಿಲ್ಲ. ರಾಜಕೀಯವಾಗಿ ಹತಾಶರಾಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ‌. ಕುಮಾರಸ್ವಾಮಿ ಅವರು ಸುಳ್ಳು ಆರೋಪದ ಮೂಲಕ ನನ್ನ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

‘ಸ್ಯಾಂಟ್ರೋ ರವಿ ಗೃಹ ಸಚಿವರ ಮನೆಯಲ್ಲೇ ಹಣದ ಗಂಟು ಬಿಚ್ಚಿ, ಎಣಿಕೆ ಮಾಡುತ್ತಿರುವ ವಿಡಿಯೊ ಇದೆ’ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಅವರು, ‘ನಾನು ಜೀವನದಲ್ಲಿ ನೈತಿಕತೆ ಪಾಲಿಸಿಕೊಂಡು ಬಂದಿದ್ದೇನೆ. ಯಾರಿಗೂ ನನ್ನ ಮನೆಗೆ ಬಂದು ಹಣದ ಗಂಟು ಬಿಚ್ಚುವ ಅವಕಾಶ ನೀಡಿಲ್ಲ’ ಎಂದಿದ್ದಾರೆ.

ಸ್ಯಾಂಟ್ರೊ ರವಿ ಪತ್ತೆಗೆ ಶೋಧ
ಬೆಂಗಳೂರು:
ಮೈಸೂರಿನಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ಸ್ಯಾಂಟ್ರೊ ರವಿ ಪತ್ತೆಗಾಗಿ ಮೈಸೂರು ಪೊಲೀಸರ ತಂಡ ಬೆಂಗಳೂರಿನಲ್ಲಿ ಶೋಧ ನಡೆಸುತ್ತಿದೆ.

‘ಸ್ಯಾಂಟ್ರೊ ರವಿಗೆ ಸೇರಿದ್ದು ಎನ್ನಲಾದ ಶೇಷಾದ್ರಿಪುರದ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ ಹಾಗೂ ಬಸವನಗುಡಿಯ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸಿದರು. ಆದರೆ, ರವಿ ಪತ್ತೆಯಾಗಿಲ್ಲ, ರಾಜ್ಯ ತೊರೆದು ಬೇರೆಡೆ ಹೋಗಿರುವ ಮಾಹಿತಿ ಇದೆ. ಆತನ ಪತ್ತೆಗಾಗಿ 11 ತಂಡಗಳು ಹುಡುಕಾಟ ಮುಂದುವರಿಸಿವೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಅಮಾನತು ಸಾಧ್ಯತೆ’
‘ಇನ್‌ಸ್ಪೆಕ್ಟರ್ ಪ್ರವೀಣ್ ಕೃತ್ಯದ ತನಿಖಾ ವರದಿ ಡಿಜಿ–ಐಜಿಪಿ ಕೈ ಸೇರಿದೆ. ಅದನ್ನು ಪರಿಶೀಲಿಸಿದ ಬಳಿಕ, ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡುವ ಸಾಧ್ಯತೆ ಇದೆ. ಜೊತೆಗೆ, ಮತ್ತಷ್ಟು ಪೊಲೀಸರು ಕೃತ್ಯಕ್ಕೆ ಸಹಕರಿಸಿರುವ ಮಾಹಿತಿಯೂ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.