ADVERTISEMENT

ಮೀನಿಗಾಗಿ ಹಾಕಿದ ಬಲೆಗೆ ಬಿತ್ತು ಆರು ಅಡಿ ಉದ್ದದ ಮೊಸಳೆ!

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 10:40 IST
Last Updated 29 ಜುಲೈ 2022, 10:40 IST
   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಮೀನು ಹಿಡಿಯಲು ಹಾಕಿದ ಬಲೆಗೆ ಮೊಸಳೆಯೇ ಸಿಕ್ಕಿಬಿದ್ದರೆ ಹೇಗೇ..!

ಚಿಕ್ಕೋಡಿ ಸಮೀಪದ, ನಿಪ್ಪಾಣಿ ತಾಲ್ಲೂಕಿನ ಕಾರದಗಾ ಗ್ರಾಮಸ್ಥರು ಗುರುವಾರ ಸಂಜೆ ಇಂಥ ವಿಶೇಷ ಘಟನೆಗೆ ಸಾಕ್ಷಿಯಾದರು.

ಕಾರದಗಾ ಗ್ರಾಮದ ಹತ್ತಿರದಲ್ಲೇ ಹರಿದ ದೂಧಗಂಗಾ ನದಿ ದಡದಲ್ಲಿ ಯುವಕ ಮೀನು ಹಿಡಿಯಲು ಬಲೆ ಹಾಕಿದ್ದರು. ಕೆಲವೇ ಕ್ಷಣಗಳಲ್ಲಿ ಬಲೆ ನದಿಯೊಳಗೆ ಜಾರಲು ಶುರುವಾಯಿತು. ದೊಡ್ಡ ಮೀನು ಸಿಕ್ಕಿದೆ ಎಂಬ ಖುಷಿಯಲ್ಲಿ ಯುವಕ ಬಲೆಯನ್ನು ದಡಕ್ಕೆ ಎಳೆದರು. ಅಷ್ಟರಲ್ಲಿ ಆರು ಅಡಿ ಉದ್ದದ ಮೊಸಳೆ ದೊಡ್ಡ ಬಾಯ್ದೆರೆದು ಮೇಲೆಕ್ಕೆ ಬಂತು. ಅದನ್ನು ಕಂಡು ಯುವಕ ಬೆಚ್ಚಿಬಿದ್ದರು. ತಕ್ಷಣ ಸಾವರಿಸಿಕೊಂಡು ಬಲೆಯ ಸಮೇತ ಮೊಸಳೆಯನ್ನು ಮರಕ್ಕೆ ಕಟ್ಟಿಹಾಕಿದರು.

ADVERTISEMENT

ಅಷ್ಟರಲ್ಲಿ ಊರಿನ ಯುವಕರು ಜಮಾಯಿಸಿರು. ನಾಗೇಶ ಕರಾಳೆ, ಬಂಡು ಗಾವಡೆ, ಕಿಸಾಳೆ ಮಧಾಳೆ, ಸುಶಾಂತ ಶಿಂಗೆ, ನಾಗೇಶ ಕಾಂಬಳೆ, ಭಾವುಸಾ ಗಾವಡೆ, ಸಾತಪ್ಪ, ಪ್ರದೀಪ ಕುರಣೆ ಸೇರಿಕೊಂಡು ಮೊಸಳೆಯ ಬಾಯಿಗೆ ಬಟ್ಟೆ ಬಿಗಿಯಾಗಿ ಬಟ್ಟೆ ಕಟ್ಟಿದರು.

ನಂತರ ಬಲೆಯಿಂದ ಬಿಡಿಸಿ, ಹೆಗಲ ಮೇಲೆ ಹೊತ್ತುಕೊಂಡು ಊರಿನತ್ತ ಬಂದರು. ಗ್ರಾಮ ಪಂಚಾಯಿತಿ ಮುಂದೆ ತಂದಿಟ್ಟ ಮೊಸಳೆಯನ್ನು ನೋಡಲು ಜನರ ಗುಂಪೇ ಸೇರಿತು. ಹಲವರು ಇದರ ಫೋಟೊ ತೆಗೆದರು. ಮತ್ತೆ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಚಿಕ್ಕೋಡಿ ವಲಯದ ಸಿಬ್ಬಂದಿ ಮೊಸಳೆಯನ್ನು ವಾಹನದಲ್ಲಿ ಹಾಕಿಕೊಂಡು ಹೋಗಿ ಕಾಡಿನಲ್ಲಿ ಬಿಟ್ಟರು.

ನಿಪ್ಪಾಣಿ ತಾಲ್ಲೂಕಿನ ಕಾರದಗಾ ದೂಧಗಂಗಾ ನದಿ ದಂಡೆಯಲ್ಲಿ ಮೀನಿನ ಬಲೆಗೆ ಬಿದ್ದ ಮೊಸಳೆಯನ್ನು ಯುವಕ ಎತ್ತಿಕೊಂಡು ಗ್ರಾಮ ಪಂಚಾಯಿತಿಗೆ ತಂದರು

ಕಳೆದ ಒಂದೂವರೆ ತಿಂಗಳಲ್ಲಿ ದೂಧಗಂಗಾ ನದಿಗೆ ಮಹಾರಾಷ್ಟ್ರ ಭಾಗದಿಂದ ಅಪಾರ ನೀರು ಹರಿದುಬಂದಿದೆ. ಇದರೊಂದಿಗೆ ದೊಡ್ಡ ಮೀನು, ಹೆಬ್ಬಾವು, ಮೊಸಳೆಗಳೂ ಹೆಚ್ಚಾಗಿ ಬರುತ್ತಿವೆ. ವಾರದ ಹಿಂದೆಯೇ ಕಾರದಗಾ ಗ್ರಾಮದ ಹೊರವಲಯದಲ್ಲಿ ಈ ಮೊಸಳೆ ಕಾಣಿಸಿಕೊಂಡಿತ್ತು. ನದಿ ದಡದ ಹೊಲಗಳಲ್ಲಿ ಕೆಲಸ ಮಾಡಲು ರೈತರು ಭಯ ಪಡುವಂತಾಗಿತ್ತು. ಸದ್ಯ ಊರಿನ ಯುವಕರು ಮೊಸಳೆ ಹಿಡಿಯುವ ಮೂಲಕ ರೈತರ ಭಯ ನಿವಾರಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.